×
Ad

ರಾಜ್ಯಪಾಲರು ಅಸಾಮಾನ್ಯ ಪರಿಸ್ಥಿತಿ ಸೃಷ್ಟಿಸಿದರು: ತಮಿಳುನಾಡು ಸ್ಪೀಕರ್

Update: 2023-01-11 22:18 IST

ಚೆನ್ನೈ, ಜ. 11: ಸಾಂಪ್ರದಾಯಿಕವಾಗಿ ರಾಜ್ಯ ಸರಕಾರ ಸಿದ್ಧಪಡಿಸುವ ಭಾಷಣವನ್ನು ಓದುವ ವೇಳೆ, ಕೆಲವು ಭಾಗಗಳನ್ನು ಕೈಬಿಟ್ಟು ತನ್ನದೇ ಭಾಷಣವನ್ನು ಓದುವ ಮೂಲಕ ರಾಜ್ಯಪಾಲ ಆರ್.ಎನ್. ರವಿ ‘‘ಅಸಾಧಾರಣ ಪರಿಸ್ಥಿತಿಯೊಂದನ್ನು’’ ಸೃಷ್ಟಿಸಿದರು ಎಂದು ಸ್ಪೀಕರ್ ಎಮ್. ಅಪ್ಪಾವು ಬುಧವಾರ ವಿಧಾನಸಭೆಯಲ್ಲಿ ಹೇಳಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ಸಭಾತ್ಯಾಗ ಮಾಡುವ ಮೂಲಕ ರಾಜ್ಯಪಾಲರು ಹೊಸ ಸಂಪ್ರದಾಯವೊಂದನ್ನು ಸೃಷ್ಟಿಸಿದ್ದಾರೆ. ರಾಜ್ಯ ಸರಕಾರ ಅನುಮೋದಿಸಿದ ಭಾಷಣದ ಭಾಗಗಳನ್ನು ಮಾತ್ರ ದಾಖಲೆಗೆ ತೆಗೆದುಕೊಳ್ಳಬೇಕು ಎಂಬುದಾಗಿ ಸ್ಪೀಕರ್‌ರನ್ನು ಕೋರುವ ನಿರ್ಣಯವೊಂದನ್ನು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಮಂಡಿಸಿದ ಬಳಿಕ, ರಾಜ್ಯಪಾಲ ರವಿ ಕೋಪದಿಂದ ವಿಧಾನಸಭೆಯಿಂದ ಹೊರನಡೆದರು.

ನಿರ್ಣಯವನ್ನು ಮಂಡಿಸಲು ಮುಖ್ಯಮಂತ್ರಿಗೆ ಅವಕಾಶ ನೀಡಿರುವ ತನ್ನ ಕ್ರಮವನ್ನು ಸ್ಪೀಕರ್ ಅಪ್ಪಾವು ಬುಧವಾರ ವಿಧಾನಸಭೆಯಲ್ಲಿ ಸಮರ್ಥಿಸಿಕೊಂಡರು.

‘‘ರಾಜ್ಯಪಾಲರು ವಿಧಾನಸಭೆಯಲ್ಲಿ ಅಸಾಧಾರಣ ಪರಿಸ್ಥಿತಿಯೊಂದನ್ನು ಸೃಷ್ಟಿಸಿದರು. ಮುಖ್ಯಮಂತ್ರಿ ಸ್ಟಾಲಿನ್‌ರ ದಿಟ್ಟ ನಿರ್ಣಯವು ರಾಜ್ಯಪಾಲರ ಪಾತ್ರ ಏನೆಂಬುದನ್ನು ಇಡೀ ಭಾರತಕ್ಕೆ ಸ್ಪಷ್ಟಪಡಿಸಿತು’’ ಎಂದು ಅಪ್ಪಾವು ಹೇಳಿದರು.

ಮುಖ್ಯಮಂತ್ರಿ ಸ್ಟಾಲಿನ್ ಅಧಿಕ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷ ಎಡಿಎಂಕೆ ಪ್ರತಿಭಟನೆ ನಡೆಸಿರುವ ನಡುವೆಯೇ ಸ್ಪೀಕರ್ ತನ್ನ ನಿಲುವನ್ನು ಸ್ಪಷ್ಟಪಡಿಸಿದರು.

‘‘ಮುಖ್ಯಮಂತ್ರಿ ಯಾವುದೇ ವಿಧಿಯನ್ನು ಉಲ್ಲಂಘಿಸಿಲ್ಲ. ಮುಖ್ಯಮಂತ್ರಿ ಆ ನಿರ್ಣಯವನ್ನು ಮಂಡಿಸದೇ ಇದ್ದಿದ್ದರೆ, ರಾಜ್ಯಪಾಲರ ವರ್ತನೆಯಿಂದ ವಿಧಾನಸಭೆಗೆ ಅವಮಾನವಾಗುತ್ತಿತ್ತು’’ ಎಂದು ಸ್ಪೀಕರ್ ಹೇಳಿದರು. ಸ್ಟಾಲಿನ್ ಮಧ್ಯಪ್ರವೇಶಿಸಿರದಿದ್ದರೆ, ಪತ್ರಿಕೆಗಳು ಸರಕಾರವನ್ನು ಟೀಕಿಸುತ್ತಿದ್ದವು ಎಂದರು.

‘‘ರಾಜ್ಯಪಾಲರಿಗೆ ಉಚಿತ ಶಿಷ್ಟಾಚಾರ ಮತ್ತು ಗೌರವ ನೀಡಲಾಗಿತ್ತು. ರಾಜ್ಯಪಾಲರ ಭಾಷಣವು ಸರಕಾರದ ನೀತಿ ಘೋಷಣೆಯಾಗಿದೆ. ರಾಜ್ಯಪಾಲರು ಅಂಗೀಕೃತ ಭಾಷಣದಿಂದ ವಿಷಯಗಳನ್ನು ಕೈಬಿಡುವುದಾಗಲಿ, ಹೊಸ ವಿಷಯಗಳನ್ನು ಸೇರಿಸುವುದಾಗಲಿ ಮಾಡುವಂತಿಲ್ಲ’’ ಎಂದು ಅಪ್ಪಾವು ಹೇಳಿದರು.

Similar News