ಪಾಠವನ್ನೇ ಮಾಡದ ಗೌರವ ಉಪನ್ಯಾಸಕರಾಗಿದ್ದ ಬೈಡನ್ ಗೆ ವಾರ್ಷಿಕ 1 ದಶಲಕ್ಷ ಡಾಲರ್ ಪಾವತಿ : ವರದಿ
ವಾಷಿಂಗ್ಟನ್, ಜ.11: ಅಮೆರಿಕದ ಈಗಿನ ಅಧ್ಯಕ್ಷ ಜೋ ಬೈಡನ್ 2017ರಿಂದ 2021ರವರೆಗೆ ಉಪಾಧ್ಯಕ್ಷರಾಗಿದ್ದು ಹುದ್ದೆ ತೊರೆದ ಬಳಿಕ ಪೆನಿಸಿಲ್ವೇನಿಯಾ ವಿವಿಯಲ್ಲಿ ಗೌರವ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು. ವಾರ್ಷಿಕ 1 ದಶಲಕ್ಷ ಡಾಲರ್ ವೇತನ ಪಡೆಯುತ್ತಿದ್ದರೂ ಅವರು ತರಗತಿಯಲ್ಲಿ ಪಾಠವನ್ನೇ ಮಾಡಿಲ್ಲ ಎಂದು ಆರ್ಎನ್ಸಿ ಸಂಶೋಧನಾ ಸಮಿತಿ ವರದಿ ಮಾಡಿದೆ.
ಮಂಗಳವಾರ ಮೆಕ್ಸಿಕೋದಲ್ಲಿ ಉತ್ತರ ಅಮೆರಿಕ ಮುಖಂಡರ ಶೃಂಗಸಭೆಯಲ್ಲಿ ಮಾತನಾಡಿದ ಬೈಡನ್, ಉಪಾಧ್ಯಕ್ಷರಾಗಿದ್ದ ಬಳಿಕ ನಾನು ಪೆನಿಸೆಲ್ವೇನಿಯಾ ವಿವಿಯಲ್ಲಿ ಪ್ರೊಫೆಸರ್ ಆಗಿದ್ದೆ ಎಂದಿದ್ದರು. ಈ ಹೇಳಿಕೆಗೆ ಪ್ರತಿಯಾಗಿ ‘ರಿಪಬ್ಲಿಕನ್ ನ್ಯಾಷನಲ್ ಕಮಿಟಿ ರಿಸರ್ಚ್ ಯುನಿಟ್’ ಅಥವಾ ಆರ್ಎನ್ಸಿ ರಿಸರ್ಚ್ ಪ್ರಕಟಿಸಿರುವ ಸಂಶೋಧನಾ ವರದಿಯಲ್ಲಿ ‘4 ವರ್ಷ ಪ್ರೊಫೆಸರ್ ಆಗಿದ್ದೆ ಎಂಬ ಬೈಡನ್ ಹೇಳಿಕೆ ಸುಳ್ಳು. ಅವರು 2017ರಿಂದ 2019ರವರೆಗೆ ಫಿಲಡೆಲ್ಫಿಯಾ ಅಧ್ಯಯನ ಸಂಸ್ಥೆಯಲ್ಲಿ ಗೌರವ ಪ್ರೊಫೆಸರ್ ಆಗಿದ್ದರು.
ಅವರು ಕಾಲೇಜಿನ ಕ್ಯಾಂಪಸ್ನಲ್ಲಿ ಉಪನ್ಯಾಸ ಅಥವಾ ಸಭಾಂಗಣದಲ್ಲಿ ಗೋಷ್ಟಿಗಳಲ್ಲಿ ಭಾಷಣ ಮಾಡುತ್ತಿದ್ದರು. ಆದರೆ ಒಂದು ತರಗತಿಯಲ್ಲಿ ಸಂಪೂರ್ಣ ಸೆಮಿಸ್ಟರ್ ಅವಧಿಗೆ ಪಾಠ ಮಾಡಲೇ ಇಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.