ಭಾರತದ ಈ ಎರಡು ಕೆಮ್ಮಿನ ಔಷಧಿ ಬಳಸಬೇಡಿ: ಉಜ್ಬೇಕಿಸ್ತಾನಕ್ಕೆ WHO ಶಿಫಾರಸ್ಸು

Update: 2023-01-12 04:18 GMT

ಜಿನೀವಾ: ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ಕಂಪನಿ ಉತ್ಪಾದಿಸಿದ ಎರಡು ಕೆಮ್ಮಿನ ಔಷಧಿಗಳನ್ನು ಉಜ್ಬೇಕಿಸ್ತಾನದಲ್ಲಿ ಮಕ್ಕಳಿಗೆ ಬಳಸದಂತೆ ವಿಶ್ವ ಆರೋಗ್ಯ ಸಂಸ್ಥೆ (WHO) ಶಿಫಾರಸ್ಸು ಮಾಡಿದೆ.

ವೈದ್ಯಕೀಯ ಉತ್ಪನ್ನಕ್ಕೆ ಸಂಬಂಧಿಸಿದಂತೆ ಬುಧವಾರ ಎಚ್ಚರಿಕೆ ನೀಡಿರುವ ಡಬ್ಲ್ಯುಎಚ್‌ಓ, ಮರಿಯನ್ ಬಯೋಟೆಕ್ ಉತ್ಪಾದಿಸಿದ ಕಳಪೆ ಗುಣಮಟ್ಟದ ವೈದ್ಯಕೀಯ ಉತ್ಪನ್ನಗಳು ಗುಣಮಟ್ಟದ ಮಾನದಂಡ ಅಥವಾ ನಿರ್ದಿಷ್ಟಪಡಿಸಿದ ಮಾನದಂಡ ತಲುಪಲು ವಿಫಲವಾಗಿವೆ ಹಾಗೂ ಇವು ನಿರ್ದಿಷ್ಟತೆಗಳಿಗೆ ಅನುಗುಣವಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಡಬ್ಲ್ಯುಎಚ್‌ಓ ವೈದ್ಯಕೀಯ ಉತ್ಪನ್ನ ಎಚ್ಚರಿಕೆಯು ಎರಡು ಕಲುಷಿತ ಅಥವಾ ಕಳಪೆ ಗುಣಮಟ್ಟದ ಉತ್ಪನ್ನಗಳಿಗೆ ಸಂಬಂಧಿಸಿದ್ದು, ಇವುಗಳನ್ನು ಉಜ್ಬೇಕಿಸ್ತಾನದಲ್ಲಿ ಪತ್ತೆ ಮಾಡಿ 2022ರ ಡಿಸೆಂಬರ್ 22ರಂದು ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ಮಾಡಲಾಗಿತ್ತು ಎಂದು ಡಬ್ಲ್ಯುಎಚ್‌ಓ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.

"ಈ ಎರಡು ಉತ್ಪನ್ನಗಳೆಂದರೆ ಅಂಬ್ರೊನಾಲ್ ಸಿರಪ್ ಮತ್ತು ಡಾಕ್-1 ಮ್ಯಾಕ್ಸ್ ಸಿರಪ್. ಈ ಔಷಧಿಗಳ ಉತ್ಪಾದಕರು ಉತ್ತರ ಪ್ರದೇಶದ ಮರಿಯನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಎಂದು ಉಲ್ಲೇಖಿಸಲಾಗಿದೆ. ಇದುವರೆಗೆ ಈ ಉತ್ಪನ್ನಗಳ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಕಂಪನಿ ಡಬ್ಲ್ಯುಎಚ್‌ಓಗೆ ಯಾವುದೇ ಖಾತರಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.

ಉಜ್ಬೇಕಿಸ್ತಾನದಲ್ಲಿ ಈ ಔಷಧ ಸೇವಿಸಿದ ಮಕ್ಕಳು ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಈ ಉತ್ಪನ್ನಗಳ ವಿರುದ್ಧ ಉಜ್ಬೇಕಿಸ್ತಾನ, ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ಮಾಡಿತ್ತು.

ಇದನ್ನೂ ಓದಿ: ಮತ್ತೊಂದು ಮೂತ್ರ ಪ್ರಕರಣ: ಈ ಬಾರಿ ವಿಮಾನ ನಿಲ್ದಾಣದ ಗೇಟ್‌ನಲ್ಲಿ...

Similar News