ದಿಲ್ಲಿಯ ಉಷ್ಣತೆ ಮೈನಸ್ 4 ಡಿಗ್ರಿಗೆ ಕುಸಿತ?: ಸಾರ್ವಕಾಲಿಕ ದಾಖಲೆಯತ್ತ ಜನವರಿ ತಿಂಗಳ ಉತ್ತರ ಭಾರತದ ಉಷ್ಣತೆ

Update: 2023-01-12 14:33 GMT

ಹೊಸದಿಲ್ಲಿ, ಜ. 12: ಈ ವಾರ ಉತ್ತರ ಭಾರತದಲ್ಲಿನ ಉಷ್ಣತೆ ಕೊಂಚ ಏರಿಕೆ ಕಂಡಿದ್ದರೂ, 2023 ಜನವರಿ ಈ ವಲಯದ ಅತಿ ಶೀತಲ ತಿಂಗಳಾಗಿ ದಾಖಲೆಗೆ ಸೇರ್ಪಡೆಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ ಎಂದು ಹವಾಮಾನ ಪರಿಣತರು ಎಚ್ಚರಿಸಿದ್ದಾರೆ. ಈ ವಲಯದ ಬಯಲು ಸೀಮೆಯಲ್ಲಿ ಉಷ್ಣತೆ ಮುಂದಿನ ವಾರ ಮೈನಸ್ 4 ಡಿಗ್ರಿಗೆ ಕುಸಿಯುವ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.

ಜನವರಿ 14 ಮತ್ತು 19ರ ನಡುವಿನ ದಿನಗಳು ಅತ್ಯಂತ ಶೀತಲ ದಿನಗಳಾಗಿರುತ್ತವೆ, ಅದರಲ್ಲೂ ಮುಖ್ಯವಾಗಿ ಜನವರಿ 16ರಿಂದ 18ರವರೆಗೆ ಶೀತ ಮಾರುತದ ತೀವ್ರತೆಯು ಅತ್ಯಂತ ಭೀಕರವಾಗಿರುತ್ತದೆ ಎಂದು ಆನ್ಲೈನ್ ಹವಾಮಾನ ಮುನ್ಸೂಚನಾ ಕೇಂದ್ರ ‘ಲೈವ್ ವೆದರ್ ಆಫ್ ಇಂಡಿಯ’ದ ಸ್ಥಾಪಕ ನವದೀಪ್ ದಹಿಯ ಟ್ವೀಟ್ ಮಾಡಿದ್ದಾರೆ.

‘‘ಜನವರಿಯ ಈವರೆಗಿನ 11 ದಿನಗಳಲ್ಲಿ ದಾಖಲೆಯ ಚಳಿಯನ್ನು ನಾವು ಅನುಭವಿಸಿದ್ದೇವೆ. ಮುಂದಿನ ಕೆಲವು ದಿನಗಳು ಇನ್ನೂ ಶೀತಲವಾಗಿರುವಂತೆ ಕಾಣುತ್ತಿವೆ. 2023 ಜನವರಿ ಇತಿಹಾಸದಲ್ಲೇ, ಬಹುಷಃ 21ನೇ ಶತಮಾನದ ಅವಧಿಗೂ ಅತ್ಯಂತ ಶೀತಲ ತಿಂಗಳು ಆಗಬಹುದಾದ ಲಕ್ಷಣಗಳಿವೆ’’ ಎಂದು ದಹಿಯ ಹೇಳಿದ್ದಾರೆ. ಪಶ್ಚಿಮದಲ್ಲಿ ಉಂಟಾಗಿರುವ ಹವಾಮಾನ ವಿನ್ಯಾಸದಿಂದಾಗಿ ವಾಯುವ್ಯ ಭಾರತದ ಬಯಲು ಪ್ರದೇಶದಲ್ಲಿ ಕನಿಷ್ಠ ಉಷ್ಣತೆಯು ಶುಕ್ರವಾರದವರೆಗೆ 2ರಿಂದ 4 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚುವ ನಿರೀಕ್ಷೆಯಿದೆ. ಆದರೆ, ಅದರ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಹೊಸದಾಗಿ ಭೀಕರ ಶೀತ ಮಾರುತ ಬೀಸಲಿದೆ ಎಂದು ಹವಾಮಾನ ಮುನ್ನೆಚ್ಚರಿಕೆ ಹೇಳಿದೆ.

23 ವರ್ಷಗಳಲ್ಲೇ ಕನಿಷ್ಠ ಉಷ್ಣತೆಯನ್ನು ದಾಖಲಿಸಿದ ಬಳಿಕ, ದಿಲ್ಲಿಯ ಉಷ್ಣತೆಯು ಗುರುವಾರ 9.3 ಡಿಗ್ರಿ ಸೆಲ್ಸಿಯಸ್ನಲ್ಲಿ ನೆಲೆಗೊಂಡಿದೆ. ಕಳೆದ ವಾರ ಇಲ್ಲಿನ ಉಷ್ಣತೆಯು 1.9 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿತ್ತು.

Similar News