×
Ad

ಮಾವೋವಾದಿಗಳ ವಿರುದ್ಧ ಬೃಹತ್ ಕಾರ್ಯಾಚರಣೆ: ಉನ್ನತ ಬಂಡುಕೋರ ನಾಯಕ ಹಿದಿಮಗೆ ಗಾಯ?‌

Update: 2023-01-12 20:17 IST

ಭೋಪಾಲ, ಜ. 12: ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳು ಬುಧವಾರ ನಡೆಸಿದ ಸರ್ಜಿಕಲ್ ದಾಳಿಯಲ್ಲಿ ಮಾವೋವಾದಿ ಬಂಡುಕೋರರ ಉನ್ನತ ನಾಯಕ ಹಾಗೂ ಭದ್ರತಾ ಪಡೆಗಳ ಮೇಲೆ ನಡೆದ ಕೆಲವು ಬೃಹತ್ ದಾಳಿಗಳ ಸೂತ್ರಧಾರನೆನ್ನಲಾದ ಮಾದ್ವಿ ಹಿದಿಮ ಗಾಯಗೊಂಡಿದ್ದಾನೆ ಎಂದು ಹೇಳಲಾಗಿದೆ.

ಹಿದಿಮನ ಗುಂಪನ್ನು ಪತ್ತೆ ಹಚ್ಚುವುದಕ್ಕಾಗಿ ಹೆಲಿಕಾಪ್ಟರ್‌ಗಳು, ಡ್ರೋನ್ ಗಳು, ಸಿಆರ್‌ಪಿಎಫ್‌ನ ಕೋಬ್ರಾ ಘಟಕ, ಛತ್ತೀಸ್‌ಗಢ ಪೊಲೀಸ್ ಮತ್ತು ತೆಲಂಗಾಣ ಪೊಲೀಸ್ನ ಗ್ರೇಹೌಂಡ್ ವಿಶೇಷ ಪಡೆಗಳನ್ನು ಕಳುಹಿಸಲಾಗಿತ್ತು. ಇದು ಇತ್ತೀಚಿನ ವರ್ಷಗಳಲ್ಲಿ ನಡೆದ ಮಾವೋವಾದಿ ನಿಗ್ರಹ ಕಾರ್ಯಾಚರಣೆಗಳಲ್ಲೇ ಅತಿ ದೊಡ್ಡ ಕಾರ್ಯಾಚರಣೆ ಎಂಬುದಾಗಿ ಬಣ್ಣಿಸಲಾಗಿದೆ.

2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಮಾವೋವಾದಿ ಬಂಡಾಯವನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಛತ್ತೀಸ್‌ಗಢದಲ್ಲಿ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಛತ್ತೀಸ್‌ಗಢ, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳ ಗಡಿಗಳು ಪರಸ್ಪರ ಸಂಧಿಸುವ ಸ್ಥಳದ ಸಮೀಪವಿರುವ ಶಿಬಿರದಲ್ಲಿ ಕೋಬ್ರಾ ಪಡೆಗಳು ಹೆಲಿಕಾಪ್ಟರ್ನಿಂದ ಇಳಿಯುತ್ತಿರುವಾಗ ಅವರ ಮೇಲೆ ಮಾವೋವಾದಿಗಳು ಗುಂಡು ಹಾರಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

‘‘ಭದ್ರತಾ ಪಡೆಗಳು ತಮ್ಮತ್ತ ಮುನ್ನಗ್ಗುತ್ತಿರುವುದನ್ನು ಕಂಡ ಮಾವೋವಾದಿಗಳು ತಪ್ಪಿಸಿಕೊಂಡಿದ್ದಾರೆ. ಕೋಬ್ರಾ ಕಮಾಂಡೊಗಳಿಗೆ ಯಾವುದೇ ಅಪಾಯವಾಗಿಲ್ಲ. ಈ ದಾಳಿಯಲ್ಲಿ ಮಾವೋವಾದಿಗಳಿಗೆ ಆಗಿರಬಹುದಾದ ಹಾನಿಯ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ’’ ಎಂದು ಸಿಆರ್‌ಪಿಎಫ್‌ ಛತ್ತೀಸ್‌ಗಢ ವಲಯದ ಇನ್‌ಸ್ಪೆಕ್ಟರ್ ಜನರಲ್ ಕಚೇರಿಯಿಂದ ಹೊರಡಿಸಲಾಗಿರುವ ಹೇಳಿಕೆಯೊಂದು ತಿಳಿಸಿದೆ.

ಆದರೆ, ದಾಳಿಯಲ್ಲಿ 55 ವರ್ಷದ ಹಿದಿಮ ಗಾಯಗೊಂಡಿದ್ದಾರೆ ಎಂಬ ವರದಿಗಳನ್ನು ಅಧಿಕಾರಿಗಳು ಖಚಿತಪಡಿಸಿಲ್ಲ. ಅವನ ತಲೆಗೆ 45 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಕಾರ್ಯಾಚರಣೆಯ ವೇಳೆ ಕೆಲವು ಸೈನಿಕರೂ ಗಾಯಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಆದರೆ, ಎಲ್ಲರೂ ಸುರಕ್ಷಿತರಾಗಿದ್ದಾರೆ.

Similar News