ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಚೀನಿ ಸೈನಿಕರ ಸಂಖ್ಯೆಯಲ್ಲಿ ತುಸು ಹೆಚ್ಚಳ: ಜ.ಪಾಂಡೆ‌

Update: 2023-01-12 15:42 GMT

ಹೊಸದಿಲ್ಲಿ, ಜ.12: ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್ಎಸಿ)ಯಲ್ಲಿ ಚೀನಿ ಸೈನಿಕರ ಸಂಖ್ಯೆಯಲ್ಲಿ ತುಸು ಹೆಚ್ಚ ಕಂಡುಬಂದಿದೆಯೆಂದು ಸೇನಾ ವರಿಷ್ಠ ಮನೋಜ್ ಪಾಂಡೆ ಗುರುವಾರ ತಿಳಿಸಿದ್ದಾರೆ.

‘‘ನಮ್ಮ ಪೂರ್ವ ಕಮಾಂಡ್ನಲ್ಲಿ ಚೀನಿ ಸೈನಿಕರ ಸಂಖ್ಯೆಯಲ್ಲಿ ತುಸು ಹೆಚ್ಚಳವುಂಟಾಗಿದೆ. ಅವರ ಚಲನವಲನಗಳ ಬಗ್ಗೆ ನಾವುನಿಕಟವಾದ ಕಣ್ಗಾವಲಿರಿಸಿದ್ದೇವೆ ’’ ಎಂದು ಜನರಲ್ ಮನೋಜ್ ಪಾಂಡೆ ತಿಳಿಸಿದ್ದಾರೆ. ಹೊಸದಿಲ್ಲಿಯಲ್ಲಿ ಮಂಗಳವಾರ ನಡೆದ ವಾರ್ಷಿಕ ಸೇನಾದಿನದ ಸಂದರ್ಭದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಛಿಯಲ್ಲಿ ಅವರು ಮಾತನಾಡುತ್ತಿದ್ದರು.

ಚೀನಾಕ್ಕೆ ತಾಗಿಕೊಂಡಿರುವ ಭಾರತದ ಉತ್ತರ ಗಡಿಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆಯಾದರೂ, ಊಹಿಸಲು ಸಾಧ್ಯವಾಗದು ಎಂದವರು ಹೇಳಿದ್ದಾರೆ. ಉಭಯದೇಶಗಳ ಸಶಸ್ತ್ರ ಪಡೆಗಳ ನಡುವೆ ತಲೆದೋರಿರುವ ಏಳು ಜಟಿಲವಾದ ವಿವಾದಗಳನ್ನು ಚರ್ಚೆಗೆ ಮಂಡಿಸಲಾಗಿದೆ ಎಂದವರು ಹೇಳಿದ್ದಾರೆ.

‘‘ಉತ್ತರದ ಗಡಿಯಲ್ಲಿನ ಪರಿಸ್ಥಿತಿಯ ಬಗ್ಗೆ ಊಹಿಸಲು ಸಾಧ್ಯವಿಲ್ಲವಾದರೂ, ನಿಯಂತ್ರಣದಲ್ಲಿದೆ. ಉಭಯದೇಶಗಳ ಸೇನಾಪಡೆಗಳ ನಡುವೆ ನಡೆದ ಮಾತುಕತೆ ಸಂದರ್ಭದಲ್ಲಿ ಚರ್ಚೆಗೆ ಬಂದ ಏಳು ವಿವಾದಾತ್ಮಕ ವಿಷಯಗಳಲ್ಲಿ ಐದನ್ನು ಬಗೆಹರಿಸಲಾಗಿದೆ’’ ಎಂದು ಸೇನಾ ವರಿಷ್ಠರು ತಿಳಿಸಿದ್ದಾರೆ.

ಪಾಕಿಸ್ತಾನದ ಗಡಿಯಲ್ಲಿ ಕದನವಿರಾಮ ಜಾರಿಯಲ್ಲಿದೆಯಾದರೂ, ಭಾರತವು ಕಟ್ಟೆಚ್ಚರದಲ್ಲಿಯೇ ಉಳಿಯಬೇಕಾಗಿದೆ ಎಂದವರು ಹೇಳಿದರು. ಆದರೂ, ಭಯೋತ್ಪಾದಕ ಮೂಲಸೌಕರ್ಯಗಳು ಹಾಗೂ ಭಯೋತ್ಪಾದಕ ಗುಂಪುಗಳಿಗೆ ಪಾಕಿಸ್ತಾನದ ಬೆಂಬಲವು ಈಗಲೂ ಉಳಿದುಕೊಂಡಿದೆ ಎಂದವರು ಹೇಳಿದರು.

ಕಳೆದ ಐದು ವರ್ಷಗಳಲ್ಲಿ ಸೇನೆಯು ಕೈಗೊಂಡ ಕಲ್ಯಾಣಕಾರ್ಯಕ್ರಮಗಳನ್ನು ವಿವರಿಸಿದ ಅವರು, ಗಡಿ ರಸ್ತೆಗಳ ಸಂಘಟನೆ (ಬಿಆರ್ಓ) ಉತ್ತರ ಗಡಿಯುದ್ದಕ್ಕೂ2100 ಕಿ.ಮೀ. ವಿಸ್ತೀರ್ಣದ ರಸ್ತೆಗಳು ಹಾಗೂ 7450 ಮೀಟರ್ ವಿಸ್ತೀರ್ಣದ ಸೇತುವೆಗಳನ್ನು ಕಳೆದ ಐದು ವರ್ಷಗಳಲ್ಲಿ ನಿರ್ಮಿಸಿದೆ ಎಂದರು.
ಅರುಣಾಚಲ ಪ್ರದೇಶದ ಗಡಿಮುಂಚೂಣಿ ಪ್ರದೇಶದ ಹೆದ್ದಾರಿಯಲ್ಲಿಯೂ ಕೆಲವು ಕಾಮಗಾರಿ ಕೆಲಸಗಳು ಪ್ರಗತಿಯಲ್ಲಿದೆ ಎಂದು ಜ. ಮನೋಜ್ ಪಾಂಡೆ ತಿಳಿಸಿದರು.

ಶೀಘ್ರದಲ್ಲೇ ಫಿರಂಗಿ ದಳಕ್ಕೆ ಮಹಿಳಾ ಸೇನಾಧಿಕಾರಿಗಳ ಸೇರ್ಪಡೆ ಭಾರತೀಯ ಸೇನಾಪಡೆಯ ಫಿರಂಗಿ ದಳಕ್ಕೂ ಶೀಘ್ರದಲ್ಲಿಯೇ ಮಹಿಳಾ ಸೇನಾಧಿಕಾರಿಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ಹೇಳಿದ ಅವರು ಈ ಬಗ್ಗೆ ಒಪ್ಪಿಗೆಗಾಗಿ ಕೇಂದ್ರ ಸರಕಾಕ್ಕೆ ಪ್ರಸ್ತಾವನೆಯೊಂದನ್ನು ಕಳುಹಿಸಲಾಗುವುದೆಂದು ಅವರು ತಿಳಿಸಿದರು.

ವಾಸ್ತವಿಕ ಗಡಿನಿಯಂತ್ರಣರೇಖೆಯ ಯಥಾಸ್ಥಿತಿಯನ್ನು ಬದಲಾಯಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಭಾರತ ಸೇನೆಯು ತಡೆಗಟ್ಟಿದೆಯೆಂದು ಜ. ಪಾಂಡೆ ಅವರು ಚೀನಾವನ್ನು ಉಲ್ಲೇಖಿಸದೆ ಹೇಳಿದರು.

Similar News