ಸೇತುಸಮುದ್ರಂ ಯೋಜನೆ ಜಾರಿಗೆ ತಮಿಳುನಾಡು ವಿಧಾನಸಭೆಯಲ್ಲಿ ಅವಿರೋಧ ನಿರ್ಣಯ

Update: 2023-01-12 15:22 GMT

ಚೆನ್ನೈ, ಜ.12: ಕೇಂದ್ರ ಸರಕಾರವು ಯಾವುದೇ ವಿಳಂಬವಿಲ್ಲದೆ ಸೇತುಸಮುದ್ರಂ ಯೋಜನೆಯನ್ನು ಜಾರಿಗೊಳಿಸಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸುವ ನಿರ್ಣಯವನ್ನು ಕೇಂದ್ರ ಸರಕಾರವು ಗುರುವಾರ ಸರ್ವಾನುಮತದಿಂದ ಅಂಗೀಕರಿಸಿತು. ಈ ಯೋಜನೆಯ ಅನುಷ್ಠಾನಕ್ಕಾಗಿ ತಮಿಳುನಾಡು ಸರಕಾರವು ಎಲ್ಲಾ ರೀತಿಯ ಸಹಕಾರವನ್ನು ಒದಗಿಸಲಿದೆಯೆಂದು ಅವರು ತಿಳಿಸಿದ್ದಾರೆ. ಮುಖ್ಯಮಂತ್ರಿ ಸ್ಟಾಲಿನ್ ಈ ನಿರ್ಣಯವನ್ನು ಸದನದಲ್ಲಿ ಮಂಡಿಸಿದರು.

ಅನಿರೀಕ್ಷಿತ ನಡೆಯೊಂದರಲ್ಲಿ, ಬಿಜೆಪಿಯ ಸದನ ನಾಯಕ ನೈನಾರ್ ನಾಗೇಂದ್ರನ್ ಮಾತನಾಡಿ, ಆದರೆ ಪುರಾಣಪುರುಷ ಶ್ರೀರಾಮಚಂದ್ರ ನಿರ್ಮಿಸಿದ್ದೆಂದು ನಂಬಲಾದ ರಾಮಸೇತುವಿಗೆ ಹಾನಿ ಮಾಡದೆ ಯೋಜನೆಯನ್ನು ಕಾರ್ಯಗತಗೊಳಿಸುವುದಾದರೆ ಅದಕ್ಕೆ ತನ್ನ ಬೆಂಬಲವಿದೆ ಎಂದು ಹೇಳಿದರು.

ಎಡಿಎಂಕೆ ಶಾಸಕ ಪೊಲ್ಲಾಚಿ ವಿ. ಜಯರಾಮನ್ ಮಾತನಾಡಿ,, ಈ ಯೋಜನೆಯಿಂದಾಗುವ ಅನುಕೂಲ - ಪ್ರತಿಕೂಲಗಳೆರಡನ್ನೂ ಅಧ್ಯಯನ ಮಾಡಬೇಕಾದ ಅಗತ್ಯವಿದೆ. ಒಂದು ವೇಳೆ ಈ ಯೋಜನೆಯಚು ಜನರಿಗೆ ಉಪಯುಕ್ತವೆಂದಾದಲ್ಲಿ ಅದನ್ನು ಅನುಷ್ಠಾನಗೊಳಿಸಬಹುದಾಗಿದೆ ಎಂದವರು ಹೇಳಿದರು. ಸೇತುಸಮುದ್ರ ಯೋಜನೆಗೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಅದರ ತೀರ್ಪು ಇನ್ನಷ್ಟೇ ಬರಬೇಕಾಗಿದೆಯೆಂಬುದನ್ನು ರಾಜ್ಯ ಸರಕಾರ ಗಮನಕ್ಕೆ ತೆಗೆದುಕೊಳ್ಳಬೇಕಾಗಿದೆ ಎಂದರು.

ಆದರೆ ಕೆಲವೊಂದು ನ್ಯೂನತೆಗಳನ್ನು ಸರಿಪಡಿಸಿ ಯೋಜನೆಯನ್ನು ಜಾರಿಗೊಳಿಸಿದಲ್ಲಿ ಅದನ್ನು ತಾನು ಬೆಂಬಲಿಸುವುದಾಗಿ ಎಡಿಎಂಕೆ ಶಾಸಕ, ವಿಧಾನಸಭೆಯ ಉಪಪ್ರತಿಪಕ್ಷ ನಾಯಕ ಓ. ಪನ್ನೀರ್ಸೆಲ್ವಂ ತಿಳಿಸಿದರು.
ಪಿಎಂಕೆ ಹಾಗೂ ಆಡಳಿತಾರೂಢ ಡಿಎಂಕೆಯ ಮಿತ್ರಪಕ್ಷಗಳಾದ ಕಾಂಗ್ರೆಸ್, ವಿಸಿಕೆ, ಸಿಪಿಎಂ, ಸಿಪಿಐ, ಎಂಡಿಎಂಕೆ, ಕೆಡಿಎಂಕೆ, ಎಂಎಂಕೆ ಹಾಗೂ ಟಿವಿಕೆ ಪಕ್ಷಗಳು ನಿರ್ಣಯವನ್ನು ಬೆಂಬಲಿಸಿವೆ.‌

Similar News