ವಿಭಜನೆಗೆ ಪ್ರಚೋದನೆ ನೀಡಿದರೆ ತಾಲಿಬಾನ್ ಮಾದರಿಯ ಪರಿಸ್ಥಿತಿ: ಕೆಸಿಆರ್ ಎಚ್ಚರಿಕೆ‌

Update: 2023-01-12 17:24 GMT

ಹೈದರಾಬಾದ್, ಜ. 12: ಸಮಾಜದಲ್ಲಿ ಧಾರ್ಮಿಕ ಮತ್ತು ಜಾತಿ ಅಂಧಾಭಿಮಾನ ಹಾಗೂ ವಿಭಜನೆಗೆ ಪ್ರಚೋದನೆ ನೀಡುವುದು ಅನಪೇಕ್ಷಿತ ಪರಿಣಾಮಗಳು ಮತ್ತು ‘ತಾಲಿಬಾನ್ ಮಾದರಿಯ ಪರಿಸ್ಥಿತಿ’ಗೆ ದಾರಿಮಾಡಿಕೊಡುತ್ತದೆ ಎಂದು ಬಿಜೆಪಿ ಮೇಲೆ ಪರೋಕ್ಷ ದಾಳಿ ನಡೆಸುತ್ತಾ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್)ಯ ಅಧ್ಯಕ್ಷ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಗುರುವಾರ ಹೇಳಿದ್ದಾರೆ.

ಮೆಹಬೂಬಾಬಾದ್ನಲ್ಲಿ ಏಕೀಕೃತ ಜಿಲ್ಲಾಧಿಕಾರಿ ಕಚೇರಿಯೊಂದನ್ನು ಉದ್ಘಾಟಿಸಿದ ಬಳಿಕ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಾಜವು ಉತ್ತಮವಾಗಿ ಅಭಿವೃದ್ಧಿ ಹೊಂದಬೇಕಾದರೆ ಶಾಂತಿ, ಸಹಿಷ್ಣುತೆ ಮತ್ತು ಸರ್ವರ ಕಲ್ಯಾಣಕ್ಕೆ ಹಾರೈಸುವ ಗುಣ ಅಗತ್ಯವಾಗಿದೆ ಎಂದು ಹೇಳಿದರು.

‘‘ಧಾರ್ಮಿಕ ಮತ್ತು ಜಾತಿ ಅಂಧಾಭಿಮಾನವನ್ನು ಉತ್ತೇಜಿಸಿದರೆ, ಜನರನ್ನು ವಿಭಜಿಸಿದರೆ ಹಾಗೂ ಇಂಥ ನೀತಿಗಳನ್ನು ಅನುಸರಿಸಿದರೆ ಸಮಾಜವು ನರಕವಾಗುತ್ತದೆ. ಅದು ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದಲ್ಲಿರುವ ಪರಿಸ್ಥಿತಿಗೆ ಸಮವಾಗುತ್ತದೆ. ಇಂಥ ದ್ವೇಷವು ದೇಶದ ಜೀವವಾಹಿನಿಯೇ ಸುಟ್ಟು ಹೋಗಬಹುದಾದ ಪರಿಸ್ಥಿತಿಗೆ ಕಾರಣವಾಗುತ್ತದೆ. ಹಾಗಾಗಿ, ಎಲ್ಲರೂ, ಅದರಲ್ಲೂ ಮುಖ್ಯವಾಗಿ ಯುವಕರು ಎಚ್ಚರದಿಂದಿರಬೇಕು’’ ಎಂದು ಕೆಸಿಆರ್ ಹೇಳಿದರು.

ಕೇಂದ್ರದಲ್ಲಿ ಪ್ರಗತಿಪರ ಮನೋಭಾವದ ‘‘ನಿಷ್ಪಕ್ಷ’’ ಸರಕಾರವಿದ್ದರೆ ಮಾತ್ರ ದೇಶ ಮತ್ತು ರಾಜ್ಯ ಪ್ರಗತಿ ಸಾಧಿಸಬಹುದು ಎಂದು ಹೇಳಿದ ಅವರು, ಭವಿಷ್ಯದ ರಾಜಕಾರಣದಲ್ಲಿ ಇಡೀ ದೇಶಕ್ಕೆ ತೆಲಂಗಾಣವು ದಾರಿ ತೋರಿಸಬೇಕೆಂದು ಬಯಸುತ್ತೇನೆ ಎಂದು ನುಡಿದರು.

Similar News