ಮುಂಬೈ ಕಂಪೆನಿಯಿಂದ ಬ್ಯಾಂಕ್ ಗಳಿಗೆ 4,957 ಕೋಟಿ ರೂ. ವಂಚನೆ: ಮೊಕದ್ದಮೆ ದಾಖಲಿಸಿದ ಸಿಬಿಐ

Update: 2023-01-12 16:31 GMT

ಹೊಸದಿಲ್ಲಿ, ಜ. 12: ಹದಿನೇಳು ಬ್ಯಾಂಕ್‌ಗಳಿಗೆ 4,957.31 ಕೋಟಿ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿರುವ ಮುಂಬೈನ ಖಾಸಗಿ ಕಂಪೆನಿ ಮತ್ತು ಅದರ ನಿರ್ದೇಶಕರ ವಿರುದ್ಧ ಕೇಂದ್ರೀಯ ತನಿಖಾ ಮಂಡಳಿ (ಸಿಬಿಐ) ಮೊಕದ್ದಮೆ ದಾಖಲಿಸಿದೆ. ಬ್ಯಾಂಕ್ ಆಫ್ ಬರೋಡ ಸಲ್ಲಿಸಿದ ದೂರಿನ ಅನ್ವಯ ಸಿಬಿಐ ಈ ಕ್ರಮ ತೆಗೆದುಕೊಂಡಿದೆ.

ಮೆಸರ್ಸ್ ಪ್ರತಿಭಾ ಇಂಡಸ್ಟ್ರೀಸ್ ಲಿಮಿಟೆಡ್, ಮುಂಬೈ; ಅಜಿತ್ ಭಗವಾನ್ ಕುಲಕರ್ಣಿ; ರವಿ ಕುಲಕರ್ಣಿ; ಸುನಂದ ದತ್ತ ಕುಲಕರ್ಣಿ ಮತ್ತು ಶರದ್ ಪ್ರಭಾಕರ್ ದೇಶಪಾಂಡೆ ವಿರುದ್ಧ ಸಿಬಿಐ ಮೊಕದ್ದಮೆ ದಾಖಲಿಸಿದೆ. ಇವರೆಲ್ಲರೂ ಕಂಪೆನಿಯ ನಿರ್ದೇಶಕರು ಮತ್ತು ಗ್ಯಾರಂಟರ್ಗಳಾಗಿದ್ದಾರೆ.

ಈ ಖಾಸಗಿ ಕಂಪೆನಿಯ ಖಾತೆಯನ್ನು 2017 ಡಿಸೆಂಬರ್ 31ರಂದು ವಸೂಲಾಗದ ಸಾಲ (ಎನ್ಪಿಎ) ಎಂಬುದಾಗಿ ಘೋಷಿಸಲಾಗಿತ್ತು. ಕಟ್ಟಡಗಳ ವಿನ್ಯಾಸ ಸೃಷ್ಟಿ, ಇಂಜಿನಿಯರಿಂಗ್ ಮತ್ತು ನಿರ್ಮಾಣ ಮುಂತಾದ ಮೂಲಸೌಕರ್ಯ ಯೋಜನೆಗಳ ಅಭಿವೃದ್ಧಿ ಕ್ಷೇತ್ರದಲ್ಲಿ ಕಂಪೆನಿ ಕೆಲಸ ಮಾಡುತ್ತಿತ್ತು. ಆರೋಪಿಗಳು ಕಂಪೆನಿಯಿಂದ ಬೃಹತ್ ಪ್ರಮಾಣದ ಹಣವನ್ನು ಅದಕ್ಕೆ ಸಂಬಂಧಿಸಿದ ಬೇರೆ ಕಂಪೆನಿಗಳಿಗೆ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮುಂಬೈ ಮತ್ತು ಥಾಣೆ ಸೇರಿದಂತೆ ಮುಂಬೈಯ ನಾಲ್ಕು ಸ್ಥಳಗಳಲ್ಲಿ ಶೋಧಗಳನ್ನು ಗುರುವಾರ ನಡೆಸಲಾಗಿದೆ ಹಾಗೂ ದಾಳಿಗಳ ವೇಳೆ ಹಲವಾರು ದಾಖಲೆಗಳನ್ನು ಪಡೆದುಕೊಳ್ಳಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

Similar News