ಜ.29 ರಂದು ಕಾಪುವಿನಲ್ಲಿ ಬೃಹತ್ ಉದ್ಯೋಗ ಮೇಳ

Update: 2023-01-12 17:30 GMT

ಕಾಪು : ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜನವರಿ 29ರಂದು ಕಾಪುವಿನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.

ಕಾಪುವಿನ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಗುರುವಾರ ಉದ್ಯೋಗ ಮೇಳದ ಮಾಹಿತಿ ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮತ್ತು ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಉದ್ಯೋಗ ಮೇಳವು ಬೆಳಗ್ಗೆ 9ರಿಂದ ಸಂಜೆ 4ಗಂಟೆಯವರೆಗೆ ನಡೆಯಲಿದೆ.

ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಥಮ ಬಾರಿಗೆ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ. ಮೂರು ಸಾವಿರಕ್ಕೂ ಅಧಿಕ ಮಂದಿ ಉದ್ಯೋಗ ನಿರೀಕ್ಷಿತ ಯುವಜನರು, ನಿರುದ್ಯೋಗಿಗಳು ಭಾಗವಹಿಸುವ ನಿರೀಕ್ಷೆಯಿದ್ದು 1 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ಕಲ್ಪಿಸುವ ನಿರೀಕ್ಷೆಯಿದೆ. 

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ದ. ಕ. ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ಉದ್ಯೋಗ ಮೇಳವನ್ನು ಉದ್ಘಾಟಿಸಲಿದ್ದು, ಶಾಸಕ ಲಾಲಾಜಿ ಆರ್. ಮೆಂಡನ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಸ್ತುವಾರಿ ಸಚಿವ ಎಸ್. ಅಂಗಾರ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಸಹಿತ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.

ಉಡುಪಿ ಜಿಲ್ಲಾ ಕೌಶಲ್ಯಾಭಿವೃದ್ಧಿ ನಿಗಮದ ನಿರ್ದೇಶಕ ಅರುಣ್‍ಪ್ರಭ ಮಾತನಾಡಿ, ಈ ಮೊದಲು ಉಡುಪಿ, ಕುಂದಾಪುರ, ಮಂಗಳೂರಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಯಶಸ್ವಿಯಾಗಿದೆ. ಕಾಪು ಕ್ಷೇತ್ರದ ನಿರುದ್ಯೋಗಿ ಯುವಕ -ಯುವತಿಯರಿಗೆ ಔದ್ಯೋಗಿಕ ಅವಕಾಶವನ್ನು ಒದಗಿಸಿಕೊಡುವ ಉದ್ದೇಶದೊಂದಿಗೆ ರಾಜ್ಯದ ವಿವಿಧೆಡೆಯಿಂದ 50ಕ್ಕೂ ಅದಿಕ ಪ್ರತಿಷ್ಠಿತ ಕಂಪೆನಿಗಳನ್ನು ಉದ್ಯೋಗ ಮೇಳಕ್ಕೆ ಆಹ್ವಾನಿಸಲಾಗಿದೆ. ಇಲ್ಲಿ ಮೂರರಿಂದ ಐದು ಸಾವಿರ ಮಂದಿಗೆ ಭಾಗವಹಿಸಲು ಅವಕಾಶವಿದ್ದು ನೋಂದಾವಣೆ ಮಾಡಿಸಿಕೊಂಡವರಿಗೆ ಅರ್ಹತೆಯ ಆಧಾರದಲ್ಲಿ ಉದ್ಯೋಗ ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದರು.

ಉದ್ಯೋಗ ಮೇಳಕ್ಕೆ ಅಭ್ಯರ್ಥಿಗಳ ನೊಂದಣೆ ಕಡ್ಡಾಯವಾಗಿ ಮಾಡವಬೇಕು. ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿಇ, ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಕನಿಷ್ಠ ಐದು ಸ್ವವಿವರಗಳ ಪ್ರತಿ, ಶೈಕ್ಷಣಿಕ ದಾಖಲೆಗಳ ಪ್ರತಿ, ಪಾಸ್‍ಪೋರ್ಟ್ ಫೋಟೋ ಹಾಗೂ ಸ್ವವಿವರದ ಅರ್ಜಿಗಳೊಂದಿಗೆ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು ಎಂದು ವಿವರಿಸಿದರು.  

ಕೌಶಲ್ಯ ಅಭಿವೃದ್ಧಿ ನಿಗಮದ ಹರ್ಷವರ್ಧನ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ 14 ಸ್ಕಿಲ್ ಡೆವಲಫ್‍ಮೆಂಟ್ ತರಬೇತಿ ಕೇಂದ್ರಗಳಿದ್ದು ಯುವಜನರಿಗೆ ಇಲ್ಲಿ ನಿರಂತರ ತರಬೇತಿ, ಮಾಹಿತಿ, ಮಾರ್ಗದರ್ಶನ ನೀಡಲಾಗುತ್ತಿದೆ. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯನ್ನೂ ಒದಗಿಸಲಾಗುತ್ತಿದೆ ಎಂದರು.

ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದ ಉದ್ಯೋಗ ಮೇಳದಲ್ಲಿ 3,500 ಮಂದಿ ಭಾಗವಹಿಸಿದ್ದು ಅವರಲ್ಲಿ 1050 ಮಂದಿ ನೋಂದಾವಣೆ ಮಾಡಿಕೊಂಡಿದ್ದು 810 ಮಂದಿ ಉದ್ಯೋಗ ಒದಗಿಸಲಾಗಿದೆ. ಉಡುಪಿಯಲ್ಲಿ ನಡೆದ ಉದ್ಯೋಗ ಮೇಳದಲ್ಲಿ 1860 ಮಂದಿ ಪಾಲ್ಗೊಂಡಿದ್ದು 807 ಮಂದಿ ನೋಂದಾವಣೆ ಮಾಡಿದ್ದು 280 ಮಂದಿಗೆ ಉದ್ಯೋಗ ಒದಗಿಸಿಕೊಡಲಾಗಿದೆ. ಮಂಗಳೂರಿನಲ್ಲಿ ನಡೆದ ಮೇಳದಲ್ಲಿ 2900 ಮಂದಿ ಪಾಲ್ಗೊಂಡಿದ್ದು 2000 ಮಂದಿ ನೋಂದಾವಣೆ ಮಾಡಿದ್ದು 1800 ಮಂದಿಗೆ ಉದ್ಯೋಗ ಒದಗಿಸಲಾಗಿದೆ ಎಂದರು. 

ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಕಂದಾಯ ನಿರೀಕ್ಷಕ ಸುಧೀರ್ ಕುಮಾರ್ ಶೆಟ್ಟಿ, ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸ್ಟೀವನ್ ಕ್ವಾಡ್ರಸ್, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಉಪಸ್ಥಿತರಿದ್ದರು.

Similar News