ಪಾಕಿಸ್ತಾನದ ಆರ್ಥಿಕ ನೆರವನ್ನು 3 ಶತಕೋಟಿ ಡಾಲರ್‌ಗೆ ಹೆಚ್ಚಿಸಿದ ಯುಎಇ
ಇಸ್ಲಮಾಬಾದ್, ಜ.12: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನಕ್ಕೆ ನೀಡುತ್ತಿರುವ ಆರ್ಥಿಕ ನೆರವನ್ನು 3 ಶತಕೋಟಿ ಡಾಲರ್ ಹೆಚ್ಚಿಸಲು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಒಪ್ಪಿದೆ ಎಂದು ಪಾಕಿಸ್ತಾನ ಹೇಳಿದೆ.
ಪಾಕಿಸ್ತಾನ ಪಾವತಿಸಲು ಬಾಕಿ ಇರುವ 2 ಶತಕೋಟಿ ಡಾಲರ್ ಸಾಲವನ್ನು ನವೀಕರಿಸಲು ಮತ್ತು ಹೊಸದಾಗಿ 1 ಶತಕೋಟಿ ಡಾಲರ್ ಸಾಲ ನೀಡಲು ಯುಎಇ ಅಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ನಹ್ಯಾನ್ ಒಪ್ಪಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಶರೀಫ್ ಅವರ ಕಚೇರಿಯ ಹೇಳಿಕೆ ಗುರುವಾರ ಹೇಳಿದೆ. ಹೂಡಿಕೆ ಸಹಕಾರವನ್ನು ಗಾಢವಾಗಿಸಲು ಮತ್ತು ಹೂಡಿಕೆ ಏಕೀಕರಣ ಅವಕಾಶಗಳನ್ನು ಸಕ್ರಿಯಗೊಳಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ಹೇಳಿಕೆ ತಿಳಿಸಿದೆ. ಪಾಕಿಸ್ತಾನದ ವಿವಿಧ ವಲಯಗಳಲ್ಲಿ 1 ಶತಕೋಟಿ ಡಾಲರ್ ಹೂಡಿಕೆ ಮಾಡುವುದಾಗಿ ಕಳೆದ ವರ್ಷ ಯುಎಇ ಘೋಷಿಸಿತ್ತು.
ಈ ಮಧ್ಯೆ, ಪಾಕಿಸ್ತಾನದ ಸೆಂಟ್ರಲ್ ಬ್ಯಾಂಕ್ ನಲ್ಲಿರುವ ಠೇವಣಿಯನ್ನು 5 ಶತಕೋಟಿ ಡಾಲರ್ಗೆ ಹೆಚ್ಚಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಸೌದಿ ಅರೆಬಿಯಾದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಘೋಷಿಸಿದ್ದಾರೆ. ಭೀಕರ ಪ್ರವಾಹದಿಂದ ಕಂಗೆಟ್ಟಿರುವ ಪಾಕ್ ಅಂತರಾಷ್ಟ್ರೀಯ ಸಮುದಾಯದಿಂದ 10 ಶತಕೋಟಿ ಡಾಲರ್ಗೂ ಅಧಿಕ ನೆರವಿನ ವಾಗ್ದಾನ ದೊರಕಿದೆ ಎಂದು ಪಾಕ್ ಸರಕಾರದ ಮೂಲಗಳು ಹೇಳಿವೆ.