ಮಹಾರಾಷ್ಟ್ರ: ಟ್ರಕ್‌ಗೆ ಢಿಕ್ಕಿ ಹೊಡೆದ ಬಸ್; 10 ಮಂದಿ ಮೃತ್ಯು, ಹಲವರಿಗೆ ಗಾಯ

Update: 2023-01-13 05:05 GMT

ಮುಂಬೈ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಖಾಸಗಿ ಬಸ್ಸೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹತ್ತು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.

ನಾಸಿಕ್-ಶಿರಡಿ ಹೆದ್ದಾರಿಯಲ್ಲಿ ಪಥರೆ ಗ್ರಾಮದ ಬಳಿ ಈ ಘಟನೆ ನಡೆದಿದೆ. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಕಚೇರಿ 5 ಲಕ್ಷ ರೂ. ಪರಿಹಾರ ಘೋಷಿಸಿದೆ.

ಮುಂಬೈನ ಥಾಣೆ ಜಿಲ್ಲೆಯ ಅಂಬರನಾಥದಿಂದ ಹೊರಟಿದ್ದ ಖಾಸಗಿ ಐಷಾರಾಮಿ ಬಸ್ ಅಹಮದ್ ನಗರ ಜಿಲ್ಲೆಯ ಶಿರಡಿಗೆ ಹೋಗುತ್ತಿತ್ತು. ಪ್ರಾಥಮಿಕ ವರದಿ ಪ್ರಕಾರ ಮೃತರಲ್ಲಿ 7 ಮಹಿಳೆಯರು, ಇಬ್ಬರು ಸಣ್ಣ ಹುಡುಗರು ಹಾಗೂ ಓರ್ವ ಪುರುಷ ಸೇರಿದ್ದಾರೆ. ಗಾಯಾಳುಗಳನ್ನು ಸಿನ್ನಾರ್ ನ ಗ್ರಾಮಾಂತರ ಆಸ್ಪತ್ರೆ ಹಾಗೂ ಸಿನ್ನಾರ್ ನಲ್ಲಿರುವ ಯಶವಂತ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Similar News