ಕಳಚಿದ ಮತ್ತೊಂದು ಸಮಾಜವಾದದ ಕೊಂಡಿ: ಶರದ್‌ ಯಾದವ್ ರಾಜಕೀಯ ಹಾದಿ ಹೀಗಿತ್ತು...

Update: 2023-01-13 10:53 GMT

ಹೊಸದಿಲ್ಲಿ: ಸಮಾಜವಾದದ ಮತ್ತೊಂದು ಕೊಂಡಿ ಕಳಚಿದ್ದು, ಸಮಾಜವಾದಿ ನಾಯಕ ಶರದ್ ಯಾದವ್ (Sharad Yadav) ಗುರುವಾರ ನಿಧನರಾಗಿದ್ದಾರೆ. ತಮ್ಮ ರಾಜಕೀಯ ಜೀವನದದ ಬಹುತೇಕ ಅವಧಿ ಜನಪ್ರಿಯ ನಾಯಕರಾಗಿದ್ದ ಅವರು, ಮೈತ್ರಿ ಯುಗದಲ್ಲಿ ಹಲವು ಮೈತ್ರಿಕೂಟಗಳ ರಚನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಜುಲೈ 1, 1947ರಂದು ಮಧ್ಯಪ್ರದೇಶದ (Madhya Pradesh) ಹೋಶಂಗಾಬಾದ್‌ನ ಬಬೈ ಗ್ರಾಮದಲ್ಲಿ ಜನಿಸಿದ ಶರದ್ ಯಾದವ್, ಮುಲಾಯಂ ಸಿಂಗ್ ಯಾದವ್ (Mulayam Singh Yadav), ಜಾರ್ಜ್ ಫೆರ್ನಾಂಡೀಸ್‌ (George Fernandes) ಥರದ ಜನಪ್ರಿಯ ಸಮಾಜವಾದಿ ನಾಯಕರ ಪೈಕಿ ಒಬ್ಬರಾಗಿದ್ದರು. ತಮ್ಮ ಸುಮಾರು ಐದು ದಶಕಗಳ ರಾಜಕೀಯ ಜೀವನದಲ್ಲಿ ಅವರು ಕೇಂದ್ರ ಸಚಿವ, ಎನ್‌ಡಿಎ ಸಂಚಾಲಕ ಹಾಗೂ ಸಂಯುಕ್ತ ಜನತಾದಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

1970ರಲ್ಲಿ ನಡೆದ ಕಾಂಗ್ರೆಸ್ ವಿರೋಧಿ ಹೋರಾಟದ ಸಂದರ್ಭದಲ್ಲಿ ಶರದ್ ಯಾದವ್ ಅವರು ರಾಜಕಾರಣದಲ್ಲಿ ಪ್ರವರ್ಧಮಾನಕ್ಕೆ ಬಂದರು. 1974ರಲ್ಲಿ ಮಧ್ಯಪ್ರದೇಶದ ಜಬಲ್ಪುರ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಸಾಧಿಸಿದ ಗೆಲುವು ಅವರನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಹೋರಾಡಲು ಪ್ರೇರೇಪಿಸಿತು.

ಮಾರ್ಚ್, 2022ರಲ್ಲಿ ಶರದ್ ಯಾದವ್ ತಾವು ಸ್ಥಾಪಿಸಿದ್ದ ಲೋಕತಾಂತ್ರಿಕ ಜನತಾದಳ ಪಕ್ಷವನ್ನು ಲಾಲೂ ಯಾದವ್ ಅವರ ರಾಷ್ಟ್ರೀಯ ಜನತಾದಳ ಪಕ್ಷದೊಂದಿಗೆ ವಿಲೀನಗೊಳಿಸಿದ್ದರು. ಈ ಸಂದರ್ಭದಲ್ಲಿ, "ವಿರೋಧ ಪಕ್ಷಗಳ ಒಗ್ಗಟ್ಟಿನೆಡೆಗೆ ಮೊದಲ ಹೆಜ್ಜೆ" ಎಂದು ಆ ವಿಲೀನವನ್ನು ಬಣ್ಣಿಸಿದ್ದರು.

ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಹಿರಿಯ ಸಮಾಜವಾದಿ ನಾಯಕ ಶರದ್ ಯಾದವ್ ತಮ್ಮ ದಿಲ್ಲಿಯ ನಿವಾಸದಲ್ಲಿ ಜನವರಿ 12, ಗುರುವಾರದಂದು ದಿಢೀರನೆ ಕುಸಿದು ಬಿದ್ದರು. ಅವರನ್ನು ಕೂಡಲೇ ಗುರುಗ್ರಾಮದಲ್ಲಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಇದನ್ನೂ ಓದಿ: 2013ರ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಪ್ರಕರಣ: ಹಿಂದೂ ರಾಷ್ಟ್ರ ಸೇನಾ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ

Similar News