×
Ad

ಮಹಾಬಲ ದೇವಾಡಿಗರಿಗೆ ಗುರು ವೀರಭದ್ರ ನಾಯಕ್ ಪ್ರಶಸ್ತಿ

Update: 2023-01-13 18:54 IST

ಉಡುಪಿ: ಬೇಳಿಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ್ ಪ್ರಶಸ್ತಿಯನ್ನು ಇಂದ್ರಾಳಿಯ ಯಕ್ಷಗಾನ ಕೇಂದ್ರದ ನಿರ್ವಾಹಕತ್ವದಲ್ಲಿ ಪ್ರಾರಂಭಿಸಲಾಗಿದ್ದು, ಪ್ರಥಮ ಪ್ರಶಸ್ತಿಗೆ ಹೆಸರಾಂತ ಹಾಸ್ಯಕಲಾವಿದ ಮಹಾಬಲ ದೇವಾಡಿಗ ಕಮಲಶಿಲೆ ಇವರು ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು 10,000 ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳ ಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಜ.27ರಂದು  ಎಂಜಿಎಂ ಕಾಲೇಜಿನ ಆವರಣದಲ್ಲಿರುವ ನೂತನ ರವೀಂದ್ರ ಮಂಟಪದಲ್ಲಿ ನಡೆಯುವ ಯಕ್ಷಗಾನ ಕೇಂದ್ರದ ವಾರ್ಷಿಕೋತ್ಸವದಂದು ನೀಡಲಾಗುವುದು ಎಂದು ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಂದಾಪುರ ತಾಲೂಕಿನ ಕಮಲಶಿಲೆಯಲ್ಲಿ ಮಂಜು ದೇವಾಡಿಗ ಹಾಗೂ ಅಕ್ಕಯ್ಯ ದೇವಾಡಿಗರ ಪುತ್ರನಾಗಿ ಜನಿಸಿದ ಮಹಾಬಲ ದೇವಾಡಿಗರು (61) ಪ್ರಾಥಮಿಕ ಶಿಕ್ಷಣವನ್ನು ಪಡೆದು ತಮ್ಮ 13ನೇ ವಯಸ್ಸಿನಲ್ಲಿ ಉಡುಪಿ ಯಕ್ಷಗಾನ ಕೇಂದ್ರಕ್ಕೆ ಸೇರಿ ಗುರು ವೀರಭದ್ರ ನಾಯ್ಕ, ನೀಲಾವರ ರಾಮಕೃಷ್ಣಯ್ಯ, ಹಿರಿಯಡ್ಕ ಗೋಪಾಲರಾಯರ ಶಿಷ್ಯನಾಗಿ ಶಾಸ್ತ್ರೀಯ ಯಕ್ಷಗಾನ ರಂಗಶಿಕ್ಷಣ ಪಡೆದರು.

ಹಿರಿಯ ಕಲಾವಿದರಾದ  ನಾಗಯ್ಯ ಶೆಟ್ಟಿ, ದೇವಪ್ಪ ಗಾಣಿಗ ಹಾಗೂ ಕಕ್ಕುಂಜೆ ಶಂಕರ ಆಚಾರ್ಯರಿಂದ ಹಾಸ್ಯಗಾರಿಕೆಯ ಸಮಗ್ರ ಜ್ಞಾನವನ್ನು ಪಡೆದ ಮಹಾಬಲ ದೇವಾಡಿಗ, ಬಡಗುತಿಟ್ಟಿನ ಸುಪ್ರಸಿದ್ಧ ಹಾಸ್ಯಕಲಾವಿದ ಹಾಲಾಡಿ ಕೊರ್ಗು ಅವರ ಛಾಪನ್ನು ಬಳಸಿ ಉಳಿಸಿಕೊಂಡಿದ್ದಾರೆ.

ಮಹಾಬಲ ದೇವಾಡಿಗರು ಬಾಹುಕ, ಚಂದಗೋಪ, ಕೈಲಾಸಶಾಸ್ತ್ರಿ, ಕಂದರ, ದಾರು, ವಿದ್ಯುಜ್ಜಿಹ್ವ ಮೊದಲಾದ ಪಾತ್ರಗಳನ್ನು ಅಭಿನಯಿಸಿ ಜನಮನಸೂರೆಗೊಂಡವರು. ಇವರು ಮಂದರ್ತಿ ಮೇಳ, ಕಮಲಶಿಲೆ, ಮಾರಣಕಟ್ಟೆ ಮೊದಲಾದ ಮೇಳಗಳಲ್ಲಿ ಸುಮಾರು 38 ವರ್ಷಗಳಿಗೂ ಹೆಚ್ಚುಕಾಲ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Similar News