ಉಚಿತ ವಿದ್ಯುತ್ ಭರವಸೆ ಖಾಸಗೀಕರಣದ ಹುನ್ನಾರ: ಸಚಿವ ಸುನಿಲ್ ಕುಮಾರ್

Update: 2023-01-13 13:43 GMT

ಉಡುಪಿ: ತಮ್ಮ ಅಧಿಕಾರ ಅವಧಿಯಲ್ಲಿ ಎಸ್ಕಾಂ ದಿವಾಳಿ ಮಾಡಿದ ಸಿದ್ದರಾಮಯ್ಯ ಜನರಿಗೆ ಅಧಿಕಾರಕ್ಕೆ ಬಂದರೆ 200 ಯೂನಿಟ್ ವಿದ್ಯುತ್ ಉಚಿತ ನೀಡುವುದಾಗಿ ಪೊಳ್ಳು ಭರವಸೆ ನೀಡುತ್ತಿದ್ದಾರೆ. ಇದರ ಹಿಂದೆ ಇಂಧನ ಇಲಾಖೆಯನ್ನು ಖಾಸಗಿಕರಣ ಮಾಡುವ ಹುನ್ನಾರ ಅಡಗಿದೆ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಐದು ವರ್ಷಗಳ ಕಾಲಾವಧಿಯಲ್ಲಿ ರಾಜ್ಯದ ಎಲ್ಲಾ ಎಸ್ಕಾಂ ಗಳನ್ನು ದಿವಾಳಿ ಮಾಡಿದ್ದರು.ಆರ್ಥಿಕ ವೈಫಲ್ಯದಿಂದ ದಿವಾಳಿ ಮಾಡಿದ್ದರು. ಹುಬ್ಬಳ್ಳಿಯ ಎಸ್ಕಾಂ ದುರಾಡಳಿತದಿಂದ ದಿವಾಳಿ ಅಂಚಿಗೆ ಬಂದಿತ್ತು. ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ ನಂತರ ಎಲ್ಲಾ ಎಸ್ಕಾಂ ಗಳಿಗೆ ರೂ. 9 ಸಾವಿರ ಕೋಟಿ ನೀಡಿದ್ದೇವೆ ಎಂದರು.

ಈಗಾಗಲೇ ಸರಕಾರ 16,000 ಕೋಟಿ ರೂಪಾಯಿ ಸಬ್ಸಿಡಿ ರೂಪದಲ್ಲಿ ಕೊಡುತ್ತಿದೆ. ಸಿದ್ಧರಾಮಯ್ಯ ಸರಕಾರದ ಆರ್ಥಿಕ ನಷ್ಟವನ್ನು ನಮ್ಮ ಸರಕಾರ  ಸರಿದೂಗಿಸುವ ಕೆಲಸ ಮಾಡಿದೆ. ಸುಳ್ಳು ಡಂಗುರ ಹೊಡೆಯುತ್ತಾ ಎಸ್ಕಾಂ ಗಳನ್ನು ಪರೋಕ್ಷವಾಗಿ ಖಾಸಗಿಕರಣ ಮಾಡುವ ಹುನ್ನಾರ ನಡೆಸುತ್ತಿದ್ದಾರೆ. ಇಂಧನ ಇಲಾಖೆಯನ್ನು ರೈತ ಮತ್ತು ಗ್ರಾಹಕ ಸ್ನೇಹಿಯಾಗಿ ಮಾಡಿದ್ದೇವೆ ಎಂದು ಅವರು ತಿಳಿಸಿದರು.

Similar News