ಅನ್ಯರು, ನಮ್ಮವರು ಎಂಬ ವಿಭಜನೆಯಿಂದ ಸಮಾಜದ ನೆಮ್ಮದಿ ಹಾಳು: ಮುಹಮ್ಮದ್ ಕುಂಞಿ
ಭಟ್ಕಳ: ಸಮಾಜದಲ್ಲಿ ಅನ್ಯರು, ನಮ್ಮವರು ಎಂಬ ವಿಭಜನಾಕಾರಿ ವಿಚಾರಗಳು ಬೆಳೆದು ಬರುತ್ತಿದ್ದು ಇದರಿಂದಾಗಿ ಸಮಾಜದ ನೆಮ್ಮದಿ ಹಾಳಾಗುತ್ತಿದೆ ಎಂದು ಸದ್ಭಾವನಾ ಮಂಚ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಬೇಸರ ವ್ಯಕ್ತಪಡಿಸಿದ್ದಾರೆ.
ಅವರು ಗುರುವಾರ ಇಲ್ಲಿನ ಬಂದರ್ ರಸ್ತೆಯಲ್ಲಿರುವ ಹೊಟೇಲ್ ರಾಯಲ್ ಓಕ್‌ನಲ್ಲಿ ಜರುಗಿದ ಸದ್ಭಾವನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದಲ್ಲಿ ಅನ್ಯರು ಎಂದು ಯಾರೂ ಇಲ್ಲ ಮತ್ತು ಇರಲೂಬಾರದು ಎಂದ ಅವರು, ಧರ್ಮದಲ್ಲಿ ಸ್ವದೇಶಿ ವಿದೇಶಿ ಧರ್ಮ ಎಂಬುದಿಲ್ಲ. ಧರ್ಮ ಎಂದರೆ ಜನರ ನಂಬಿಕೆ, ಜನರಿಗೆ ಬೆಳಕು ತೋರಿಸುವ ಮಾರ್ಗ ಎಂದರು.
ಕಾರ್ಯಕ್ರಮದಲ್ಲಿ ಸದ್ಭಾವನಾ ಮಂಚ್ ಗೌರವಾಧ್ಯಕ್ಷ ಮೌಲಾನ ಮುನವ್ವರ್ ಪೇಶಮಾಮ್, ಉಪಾಧ್ಯಕ್ಷ ಪಾಸ್ಕಲ್ ಗೋಮ್ಸ್, ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ., ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾ ಸಂಚಾಲಕ ಮುಹಮ್ಮದ್ ತಲ್ಹಾ ಸಿದ್ದಿಬಾಪ ಉಪಸ್ಥಿತರಿದ್ದರು.
ಭಟ್ಕಳದ ಸದ್ಭಾವನಾ ಮಂಚ್‌ನ ಅಧ್ಯಕ್ಷ ಸತೀಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಸದ್ಭಾವನಾ ಮಂಚ್ ಕಾರ್ಯದರ್ಶಿ ಎಂ.ಆರ್.ಮಾನ್ವಿ ಕಾರ್ಯಕ್ರಮ ನಿರೂಪಿಸಿದರು. ಜಮಾಅತೆ ಇಸ್ಲಾಮೀ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯದ್ ಝುಬೈರ್ ಎಸ್.ಎಂ. ವಂದಿಸಿದರು.