ಉತ್ತರಪ್ರದೇಶ: ರೈಲಿನಲ್ಲಿ ವ್ಯಾಪಾರಿಗೆ ಹಲ್ಲೆ, ಧಾರ್ಮಿಕ ಘೋಷಣೆ ಕೂಗುವಂತೆ ಬಲವಂತ

Update: 2023-01-14 17:26 GMT

ಲಕ್ನೋ, ಜ.14: ದಿಲ್ಲಿ-ಪ್ರತಾಪಗಡ ಪದ್ಮಾವತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಆಸನವೊಂದಕ್ಕಾಗಿ ನಡೆದ ಜಗಳದ ಬಳಿಕ ಮೊರಾದಾಬಾದ್‌ನ ಹಿತ್ತಾಳೆ ಸಾಮಗ್ರಿಗಳ ವ್ಯಾಪಾರಿಯೋರ್ವನ ಮೇಲೆ ಹಲ್ಲೆ ನಡೆಸಿದ ಗುಂಪು,ಬಲವಂತದಿಂದ ಆತನನ್ನು ಧಾರ್ಮಿಕ ಘೋಷಣೆಗಳನ್ನು ಕೂಗುವಂತೆ ಮಾಡಿದೆ. ರೈಲು ಮೊರಾದಾಬಾದ್ ನಿಲ್ದಾಣದ ಹೊರವಲಯದಲ್ಲಿ ನಿಂತಾಗ ಗುಂಪು ಅತನನ್ನು ಕೆಳಕ್ಕೆ ತಳ್ಳಿದೆ. ಸಂತ್ರಸ್ತ ವ್ಯಕ್ತಿ ಶುಕ್ರವಾರ ಸಂಜೆ ಅಪರಿಚಿತ ವ್ಯಕ್ತಿಗಳ ವಿರುದ್ಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗುರುವಾರ ರಾತ್ರಿ ಊರಿಗೆ ಮರಳಲು ದಿಲ್ಲಿಯಿಂದ ಪದ್ಮಾವತ್ ಎಕ್ಸ್‌ಪ್ರೆಸ್‌ನ ಜನರಲ್ ಬೋಗಿಯನ್ನು ಹತ್ತಿದ್ದೆ. ರೈಲು ಹಾಪುರ್ ನಿಲ್ದಾಣವನ್ನು ಬಿಟ್ಟ ಬಳಿಕ ಗುಂಪೊಂದು ಆಸನವನ್ನು ತೆರವುಗೊಳಿಸುವಂತೆ ತನಗೆ ಸೂಚಿಸಿತ್ತು ಮತ್ತು ಅದಕ್ಕೆ ತಾನು ನಿರಾಕರಿಸಿದ್ದೆ. ಬಳಿಕ ತನ್ನೊಂದಿಗೆ ಜಗಳಕ್ಕಿಳಿದಿದ್ದ ಅಪರಿಚಿತ ವ್ಯಕ್ತಿಗಳು ತನ್ನ ಮೇಲೆ ಹಲ್ಲೆ ನಡೆಸಿ ಬಟ್ಟೆಗಳನ್ನು ಹರಿದಿದ್ದರು. ಅವರು ತನ್ನ ಗಡ್ಡವನ್ನೂ ಹಿಡಿದೆಳೆದಿದ್ದರು ಮತ್ತು ಧಾರ್ಮಿಕ ಘೋಷಣೆಗಳನ್ನು ಕೂಗುವಂತೆ ಬಲವಂತಗೊಳಿಸಿದ್ದರು ಎಂದು ಮೊರಾದಾಬಾದ್‌ನ ಪೀರ್‌ಝಾದಾ ಬಡಾವಣೆಯ ನಿವಾಸಿಯಾಗಿರುವ ಆಸಿಂ ಹುಸೇನ್ ದೂರಿನಲ್ಲಿ ಆರೋಪಿಸಿದ್ದಾರೆ.

ಗುಂಪು ತನ್ನನ್ನು ಮೊರಾದಾಬಾದ್ ನಿಲ್ದಾಣದ ಬಳಿ ರೈಲಿನಿಂದ ಹೊರಕ್ಕೆ ತಳ್ಳಿದಾಗ ಕೆಲವು ಬಟ್ಟೆಗಳನ್ನು ತರುವಂತೆ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದೆ ಮತ್ತು ನಂತರ ಮನೆಗೆ ತೆರಳಿದ್ದೆ ಎಂದು ಅವರು ತಿಳಿಸಿದ್ದಾರೆ.

ಘಟನೆ ಸಂದರ್ಭದಲ್ಲಿ ಕೆಲವು ಸಹಪ್ರಯಾಣಿಕರು ಅದನ್ನು ಚಿತ್ರೀಕರಿಸಿ ವೀಡಿಯೊವನ್ನು ರೈಲ್ವೆ ಪೊಲೀಸರಿಗೆ ಟ್ಯಾಗ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಿದ್ದರು. ಇದನ್ನು ಗಂಭಿರವಾಗಿ ತೆಗೆದುಕೊಂಡಿರುವ ರೈಲ್ವೆ ಪೊಲೀಸರು ಬರೇಲಿಯಲ್ಲಿ ಇಬ್ಬರನ್ನು ಬಂಧಿಸಿದ್ದು,ಅವರನ್ನು ರಾಯ್‌ಬರೇಲಿಯ ಸತೀಶ ಕುಮಾರ ಮತ್ತು ಪ್ರತಾಪಗಡದ ಸೂರಜ್ ಎಂದು ಗುರುತಿಸಲಾಗಿದೆ.

ಇತರ ದುಷ್ಕರ್ಮಿಗಳ ಬಂಧನಕ್ಕಾಗಿ ಪೊಲೀಸರು ಪ್ರಯತ್ನಗಳನ್ನು ನಡೆಸಿದ್ದಾರೆ.

Similar News