ಅಧ್ಯಕ್ಷರ ಆದೇಶಕ್ಕೆ ವಿರೋಧ: ಇಂಡೋನೇಶ್ಯದಲ್ಲಿ ಸಾವಿರಾರು ಕಾರ್ಮಿಕರ ಪ್ರತಿಭಟನೆ

Update: 2023-01-14 17:56 GMT

ಜಕಾರ್ತ, ಜ.14: ಕಾರ್ಮಿಕರ ಹಕ್ಕುಗಳು ಮತ್ತು ಪರಿಸರ ಸಂರಕ್ಷಣೆಯನ್ನು ಕಸಿದುಕೊಳ್ಳುತ್ತದೆ ಎಂಬ ಟೀಕೆಗೆ ಒಳಗಾಗಿರುವ ಅಧ್ಯಕ್ಷರ ಆದೇಶವನ್ನು ಸಂಸತ್ತು ತಿರಸ್ಕರಿಬೇಕೆಂದು ಆಗ್ರಹಿಸಿ ಸಾವಿರಾರು ಕಾರ್ಮಿಕರು ಶನಿವಾರ ಇಂಡೋನೇಶ್ಯದ ರಾಜಧಾನಿ ಜಕಾರ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ದೇಶದ ಉದ್ಯೋಗ ಕಾನೂನನ್ನು ಬದಲಿಸಿ ಕಳೆದ ವಾರ ಅಧ್ಯಕ್ಷ ಜೋಕೊ ವಿಡೋಡೊ ತುರ್ತು ಆದೇಶ ಹೊರಡಿಸಿದ್ದರು. ಇದು ನ್ಯಾಯಾಲಯದ ಆದೇಶವನ್ನು ಉಲ್ಲಂಸುತ್ತದೆ ಎಂದು ಕಾನೂನುತಜ್ಞರು ಹೇಳಿದ್ದರು.

ಅಧ್ಯಕ್ಷರು ಹೊರಡಿಸಿದ ಆದೇಶವು ಉದ್ಯೋಗ ಕಾನೂನಿನ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವ ಸರಕಾರದ ತಂತ್ರವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಈ ಕಾನೂನು ಕಾರ್ಮಿಕರ ಕಲ್ಯಾಣವನ್ನು ಕೆಳದರ್ಜೆಗೆ ಇಳಿಸುತ್ತದೆ, ಕಾರ್ಮಿಕರ ರಕ್ಷಣೆಯನ್ನು ಕಡಿಮೆಗೊಳಿಸುತ್ತದೆ ಮತ್ತು ಕೃಷಿ ಸಮಸ್ಯೆ, ಪರಿಸರ, ಮಹಿಳೆಯರ ರಕ್ಷಣೆ ಸೇರಿದಂತೆ ವ್ಯಾಪಕ ಹಾನಿಯೆಸಗಲಿದೆ. 

ಉದ್ಯೋಗ ಸೃಷ್ಟಿ ಕಾರ್ಮಿಕರ ಕಲ್ಯಾಣ ಸುಧಾರಣೆಗೆ ಅನುಗುಣವಾಗಿರಬೇಕು. ಆದರೆ ಈ ಆದೇಶ ಅದಕ್ಕೆ ವಿರುದ್ಧವಾಗಿದೆ. ಆದ್ದರಿಂದಲೇ ನಾವಿದನ್ನು ವಿರೋಧಿಸುತ್ತಿದ್ದೇವೆ’ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ‘ಹೊರಗುತ್ತಿಗೆಗೆ ನಮ್ಮ ವಿರೋಧವಿದೆ’ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ಕಾನೂನನ್ನು ಅಂಗೀಕರಿಸುವ ಮೊದಲು ಸಾಕಷ್ಟು ಸಾರ್ವಜನಿಕ ಚರ್ಚೆ ನಡೆದಿಲ್ಲ ಎಂದು ಹೇಳಿದ್ದ ಸಾಂವಿಧಾನಿಕ ನ್ಯಾಯಾಲಯ 2020ರ ಉದ್ಯೋಗ ಸೃಷ್ಟಿ ಕಾನೂನು ದೋಷಪೂರಿತವಾಗಿದೆ ಎಂದು ತೀರ್ಪು ನೀಡಿತ್ತು ಹಾಗೂ ನವೀಕೃತ ಪ್ರಕ್ರಿಯೆಯನ್ನು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಂಸದರಿಗೆ ಆದೇಶಿಸಿತ್ತು.

ಉದ್ಯೋಗ ಸೃಷ್ಟಿ ತುರ್ತು ಆದೇಶದ ಅಗತ್ಯವೇ ಇಲ್ಲ, ಯಾಕೆಂದರೆ ಇಲ್ಲಿ ಅಂತಹ ತುರ್ತು ಸ್ಥಿತಿ ನಿರ್ಮಾಣವಾಗಿಲ್ಲ. ಅಧ್ಯಕ್ಷರ ಆದೇಶವು ಕಾರ್ಮಿಕರಲ್ಲಿ ಅನಿಶ್ಚಿತತೆಯನ್ನು ಸೃಷ್ಟಿಸಿದೆ. ಏಕೆಂದರೆ ಅವರನ್ನು ಸುಲಭವಾಗಿ ವಜಾಗೊಳಿಸಬಹುದು ಎಂದು ಕಾರ್ಮಿಕರು ಹೇಳಿದ್ದಾರೆ.

ಉದ್ಯೋಗ ಹೊರಗುತ್ತಿಗೆ ನೀಡುವುದು ಮತ್ತು ಕನಿಷ್ಠ ವೇತನ ನಿಯಮದ ಬಗ್ಗೆ ಹೆಚ್ಚಿನ ಕಳವಳವಿದೆ. ಕಾರ್ಮಿಕರ ಕಲ್ಯಾಣವನ್ನು ದುರ್ಬಲಗೊಳಿಸಲು ಕೊಳಕು ಉದ್ಯಮಿಗಳ ಏಜೆಂಟರಂತೆ ಸರಕಾರ ವರ್ತಿಸಬಾರದು ಎಂದು ನಾವು ಬಯಸುತ್ತೇವೆ ಎಂದು ಲೇಬರ್ ಪಕ್ಷದ ಅಧ್ಯಕ್ಷ ಸಯೀದ್ ಇಕ್ಬಾಲ್ ಹೇಳಿದ್ದಾರೆ. ಉದ್ಯೋಗ ಸೃಷ್ಟಿ ಕಾನೂನಿನಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎಂದು ವಿದೇಶಿ ಹೂಡಿಕೆದಾರರು ಸ್ವಾಗತಿಸಿದ್ದಾರೆ. ಈಗ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಅಧ್ಯಕ್ಷರ ಆದೇಶದ ಕಾನೂನು ಸ್ಥಿತಿಯನ್ನು ಸಂಸತ್ತು ಪರಿಶೀಲಿಸಲಿದೆ ಎಂದು ಉಪಸ್ಪೀಕರ್ ಹೇಳಿದ್ದಾರೆ.

Similar News