ನೇಪಾಳ: ಭೀಕರ ವಿಮಾನ ದುರಂತ; ಕನಿಷ್ಠ 67 ಸಾವು

Update: 2023-01-15 10:53 GMT

ಕಠ್ಮಂಡು: ಸುಮಾರು 72 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಯೇತಿ ಏರ್‌ಲೈನ್ಸ್ ವಿಮಾನ ರವಿವಾರ ಬೆಳಗ್ಗೆ ನೇಪಾಳದ ಪೋಖರಾ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ  ಪತನಗೊಂಡಿದೆ. ವಿಮಾನ ದುರಂತದಲ್ಲಿ ಕನಿಷ್ಠ 67 ಮಂದಿ ಮೃತಪಟ್ಟಿದ್ದಾರೆಂದು ವರದಿಯಾಗಿದೆ.

ವಿಮಾನವು  ಪತನಗೊಂಡ ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ರಕ್ಷಣಾ ಕಾರ್ಯಕರ್ತರು ಬೆಂಕಿಯನ್ನು ನಂದಿಸಲು ಯತ್ನಿಸಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

 ಪೋಖರಾ-ಕಠ್ಮಂಡು ವಿಮಾನದಲ್ಲಿ 68 ಪ್ರಯಾಣಿಕರು ಹಾಗೂ  ನಾಲ್ವರು ಸಿಬ್ಬಂದಿ ಇದ್ದರು ಎಂದು ವರದಿಗಳು ತಿಳಿಸಿವೆ.

ಯೇತಿ ಏರ್‌ಲೈನ್ಸ್ ಸೇರಿರುವ  ಅವಳಿ-ಎಂಜಿನ್ ಎಟಿಆರ್ 72 ವಿಮಾನವು ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಪೋಖರಾಕ್ಕೆ ಹೊರಟಿತ್ತು. ಪೋಖರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಗೆ ಸಮೀಪವಿದ್ದಾಗ  ಹಳೆಯ ವಿಮಾನ ನಿಲ್ದಾಣ ಹಾಗೂ  ಹೊಸ ವಿಮಾನ ನಿಲ್ದಾಣದ ನಡುವಿನ ಸೇಟಿ ನದಿಯ ದಡದಲ್ಲಿ ವಿಮಾನ ಅಪಘಾತಕ್ಕೀಡಾಯಿತು ಎಂದು ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ವಿಮಾನ ಟೇಕ್-ಆಫ್ ಆದ ಸುಮಾರು 20 ನಿಮಿಷಗಳ ನಂತರ ಅಪಘಾತ ಸಂಭವಿಸಿದೆ. ಎರಡು ನಗರಗಳ ನಡುವಿನ ಹಾರಾಟದ ಸಮಯ 25 ನಿಮಿಷಗಳು.

ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳನ್ನು ರವಾನಿಸಲಾಗಿದೆ.

ಆರು ಮಕ್ಕಳು ಸೇರಿದಂತೆ 15 ವಿದೇಶಿ ಪ್ರಜೆಗಳು ವಿಮಾನದಲ್ಲಿದ್ದರು. 53 ನೇಪಾಳಿಯನ್ನರು, 5 ಭಾರತೀಯರು, 4 ರಷ್ಯನ್ನರು, ಇಬ್ಬರು ಕೊರಿಯನ್, ಹಾಗೂ ಅರ್ಜೆಂಟೀನಾ, ಐರ್ಲೆಂಡ್, ಆಸ್ಟ್ರೇಲಿಯಾ ಮತ್ತು ಫ್ರಾನ್ಸ್‌ನ ತಲಾ ಒಬ್ಬ ನಾಗರಿಕರು ವಿಮಾನದಲ್ಲಿದ್ದರು ಎಂದು ಏರ್‌ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ.

Similar News