ರಾಷ್ಟ್ರಾಧ್ಯಂತ ‘ಸಂಕಲ್ಪ ದಿವಸ’ ಆಚರಿಸಲು ಪ್ರಧಾನಿಗೆ ಮಾರ್ಗದರ್ಶನ: ಪೇಜಾವರ ಶ್ರೀ

Update: 2023-01-15 17:25 GMT

ಉಡುಪಿ: ರಾಮ ಮಂದಿರ ನಿರ್ಮಾಣದ ಜೊತೆ ರಾಮರಾಜ್ಯದ ಕನಸಿನೊಂದಿಗೆ ಶ್ರೀರಾಮ ಸೇವಾ ಸಂಕಲ್ಪ ಅಭಿಯಾನವನ್ನು ನಡೆಸಲು ಚಿಂತನೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿರುವ ದುರ್ಬಲರು, ಅಶಕ್ತರು, ಬಡವರಿಗೆ ಸಹಾಯ ಮಾಡುವ ಸಂಕಲ್ಪ ದಿವಸವನ್ನು ರಾಷ್ಟ್ರಾದ್ಯಂತ ಆಚರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮಾರ್ಗದರ್ಶನ ನೀಡಲಾಗು ವುದು ಎಂದು ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಪೇಜಾವರ ಮಠದ ಶ್ರೀರಾಮ ವಿಠಲ ಸಭಾಂಗಣದಲ್ಲಿ ರವಿವಾರ ನಡೆದ ಶ್ರೀರಾಮ ಸೇವಾ ಸಂಕಲ್ಪ ಅಭಿಯಾನ ಸಭೆಯಲ್ಲಿ ಮಾತನಾಡುತಿದ್ದರು. ರಾಮ ಮಂದಿರದ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ. ಮುಂದಿನ ಜನವರಿಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆ ಆಗಲಿದೆ. ಆದರೆ ಮಂದಿರ ನಿರ್ಮಾಣ ಮಾತ್ರ ನಮ್ಮ ಕನಸು ಅಲ್ಲ. ಇದರೊಂದಿಗೆ ರಾಮರಾಜ್ಯ ಸಕಾರ ಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಇಡಬೇಕಾಗಿದೆ ಎಂದರು.

ನಮ್ಮ ಸಮಾಜದಲ್ಲಿರುವ ಅರ್ಹರಿಗೆ ಸಹಾಯ ಮಾಡಿ, ಆ ಸೇವೆಯನ್ನು ದೇವರಿಗೆ ಸಮರ್ಪಿಸುವ ಕಾರ್ಯ ಮಾಡಬೇಕು. ಫಲಾನುಭವಿಗಳನ್ನು ನಾವೇ ಗುರುತಿಸಿ, ಅವರಿಗೆ ಸೇವೆ ಸಲ್ಲಿಸಬೇಕು. ಇದರಲ್ಲಿ ಸಂಘಸಂಸ್ಥೆಗಳು, ಕಂಪೆನಿ, ಕೈಗಾರಿಕೋದ್ಯಮಿಗಳು ಕೂಡ ಕೈಜೋಡಿಸಬೇಕು. ಒಂದೊಂದು ಸಂಘ ಸಂಸ್ಥೆ ಗಳು ಒಂದೊಂದು ಒಳ್ಳೆಯ ಕೆಲಸ ಮಾಡಿದರೆ ಸಮಾಜದಲ್ಲಿ ಬಗಳ ದೊಡ್ಡ ಕ್ರಾಂತಿ ಆಗುತ್ತದೆ. ಇದರಿಂದ ರಾಮ ರಾಜ್ಯದ ಕನಸು ನನಸು ಆಗಲು ಸಾಧ್ಯ ಎಂದರು.ಈ ಕಾರ್ಯ ಕೇವಲ ಉಡುಪಿ, ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗಿ ರದೆ ದೇಶದ ಎಲ್ಲ ಕಡೆಗಳಲ್ಲಿ ನಡೆಯಬೇಕು. ಆ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳಿಗೆ ಸಂಕಲ್ಪ ದಿವಸ ಆಚರಿಸಲು ಸೂಚನೆ ನೀಡಲಾಗುವುದು. ಇದರಿಂದ ದೇಶದಲ್ಲಿ ಬಹಳ ದೊಡ್ಡ ಪರಿವರ್ತನೆ ತರಲು ಸಾಧ್ಯವಾಗುತ್ತದೆ. ಗ್ರಾಮ, ಜಿಲ್ಲೆ, ರಾಜ್ಯ ಗಳಲ್ಲಿ ನಡೆಯುವ ಒಳ್ಳೆಯ ಕೆಲಸಗಳನ್ನು ಆ್ಯಪ್ ಮೂಲಕ ಕ್ರೋಢಿಕರಿಸುವ ಕಾರ್ಯ ಕೂಡ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಪ್ರಮುಖರಾದ ಮಟ್ಟಾರು ರತ್ನಾಕರ ಹೆಗ್ಡೆ, ಡಾ.ರವಿರಾಜ್ ಆಚಾರ್ಯ, ಸುಪ್ರಸಾದ್ ಶೆಟ್ಟಿ, ಪ್ರದೀಪ್ ಕುಮಾರ್ ಕಲ್ಕೂರ ಮೊದ ಲಾದವರು ಮಾತನಾಡಿದರು. ವಾಸುದೇವ ಭಟ್ ಪೆರಪಂಳ್ಳಿ ಕಾರ್ಯಕ್ರಮ ನಿರೂಪಿಸಿದರು.

‘ನನ್ನ 60 ವರ್ಷದ ಜನ್ಮದಿನಾಚರಣೆಯ ಪ್ರಯುಕ್ತ ಅರ್ಹ ಬಡವರಿಗೆ 6 ಮನೆಗಳನ್ನು ನಿರ್ಮಿಸಿ ಕೊಡಲು ಸಂಕಲ್ಪ ಮಾಡಿದ್ದೇನೆ. ಇದೇ ರೀತಿ ಎಲ್ಲರು ತಮ್ಮ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವದ ದಿನಾಚರಣೆ ಜೊತೆ ಒಂದು ಒಳ್ಳೆಯ ಕೆಲಸ ಕೂಡ ಮಾಡಬೇಕು. ಇದರಿಂದ ರಾಮ ದೇವರ ಹೆಸರಿನಲ್ಲಿ ಪರಿವರ್ತನೆ ಮಾಡಲು ಸಾಧ್ಯವಾಗುತ್ತದೆ. ದೇವ ಭಕ್ತಿ ಬೇರೆ ಅಲ್ಲ, ದೇಶ ಭಕ್ತಿ ಬೇರೆ ಅಲ್ಲ. ಮಂದಿರ ಉದ್ಧಾರ ದೇಶದ ಉದ್ದಾರ ಆಗಬೇಕು. ಇದರಿಂದ ಮಂದಿರದಿಂದ ದೇಶಕ್ಕೆ ಏನು ಲಾಭ ಆಯಿತು ಎಂಬ ಆಕ್ಷೇಪಗಳಿಗೆ ಅವಕಾಶವೇ ಇರುವುದಿಲ್ಲ’

-ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

Similar News