ಹಾಕಿ ವಿಶ್ವಕಪ್: ಭಾರತ-ಇಂಗ್ಲೆಂಡ್ ಪಂದ್ಯ ಗೋಲುರಹಿತ ಡ್ರಾ

Update: 2023-01-15 15:51 GMT

ರೂರ್ಕೆಲಾ, ಜ.15:ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ರವಿವಾರ ನಡೆದ ‘ಡಿ’ ಗುಂಪಿನ ಪಂದ್ಯ ಗೋಲುರಹಿತ ಡ್ರಾನಲ್ಲಿ ಕೊನೆಗೊಂಡಿದೆ.

 ರೂರ್ಕೆಲಾದ ಬಿರ್ಸ ಮುಂಡಾ ಹಾಕಿ ಸ್ಟೇಡಿಯಮ್‌ನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಹಲವು ಪೆನಾಲ್ಟಿ ಅವಕಾಶಗಳನ್ನು ಕೈಚೆಲ್ಲಿದವು. ಎದುರಾಳಿ ತಂಡಕ್ಕೆ ಗೋಲು ನಿರಾಕರಿಸಿ ಅಮೋಘ ಪ್ರದರ್ಶನ ನೀಡಿದ್ದ ಇಂಗ್ಲೆಂಡ್‌ನ ಗೋಲ್‌ಕೀಪರ್ ಒಲಿವರ್ ಪೇನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಮೊದಲ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಗೋಲು ಗಳಿಸಲಿಲ್ಲ. ಇಂಗ್ಲೆಂಡ್‌ಗೆ ಹೆಚ್ಚು ಅವಕಾಶ ಲಭಿಸಿತ್ತು. 2ನೇ ಕ್ವಾರ್ಟರ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದರೂ ಹಲವು ಅವಕಾಶಗಳನ್ನು ಕಳೆದುಕೊಂಡಿತು. ಮೂರನೇ ಕ್ವಾರ್ಟರ್‌ನಲ್ಲಿ ಭಾರತ ತನ್ನ ದಾಳಿಯನ್ನು ಉತ್ತಮಪಡಿಸಿತು. ಆದರೆ ಗೋಲು ಕೈಗೆಟುಕಲಿಲ್ಲ. ಕೊನೆಯ ಕ್ವಾರ್ಟರ್‌ನಲ್ಲಿ ಇಂಗ್ಲೆಂಡ್ ಗೋಲು ಗಳಿಸಲು ಭಾರೀ ಪ್ರಯತ್ನಪಟ್ಟಿತು. ಆದರೆ ಅಂತಿಮವಾಗಿ ಪಂದ್ಯವು ಗೋಲುರಹಿತ ಡ್ರಾನಲ್ಲಿ ಮುಕ್ತಾಯವಾಯಿತು.

ಈ ಪಂದ್ಯ ಡ್ರಾ ಆಗಿರುವ ಹಿನ್ನೆಲೆಯಲ್ಲಿ 4 ಅಂಕದೊಂದಿಗೆ ಇಂಗ್ಲೆಂಡ್ ಡಿ ಗುಂಪಿನಲ್ಲಿ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. ಭಾರತ ಕೂಡ 4 ಅಂಕ ಗಳಿಸಿದ್ದರೂ ಗೋಲು ಸರಾಸರಿಯಿಂದಾಗಿ 2ನೇ ಸ್ಥಾನದಲ್ಲಿದೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಕ್ವಾರ್ಟರ್ ಫೈನಲ್‌ನಲ್ಲಿ ನೇರ ಪ್ರವೇಶ ಪಡೆಯಲು ಭಾರತವು ವೇಲ್ಸ್ ವಿರುದ್ಧದ ತನ್ನ ಅಂತಿಮ ಗ್ರೂಪ್ ಪಂದ್ಯವನ್ನು ಭಾರೀ ಅಂತರದಿಂದ ಗೆಲ್ಲಬೇಕಾಗಿದೆ.

Similar News