ಕುಸಿಯುತ್ತಿರುವ ಜೋಶಿಮಠ: ವಾಲಿದ ಇನ್ನೂ ಎರಡು ಹೋಟೆಲ್ ಗಳು, ದೊಡ್ಡದಾಗುತ್ತಿರುವ ಬಿರುಕುಗಳು

Update: 2023-01-15 17:12 GMT

ಡೆಹ್ರಾಡೂನ್/ಜೋಶಿಮಠ,ಜ.15: ಭೂಕುಸಿತಗಳಿಂದ ಪೀಡಿತ ಉತ್ತರಾಖಂಡದ ಜೋಶಿಮಠದಲ್ಲಿ ರವಿವಾರ ಔಲಿ ರೋಪ್ವೇ ಮತ್ತು ಇತರ ಪ್ರದೇಶಗಳಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಂಡಿದ್ದು,ಇನ್ನೂ ಎರಡು ಹೋಟೆಲ್ಗಳು ಪರಸ್ಪರ ಅಪಾಯಕಾರಿಯಾಗಿ ವಾಲಿಕೊಂಡಿವೆ.

ಪಟ್ಟಣದ ಮಾರ್ವಾರಿ ಪ್ರದೇಶದಲ್ಲಿಯ ಜೆಪಿ ಕಾಲನಿಯಲ್ಲಿ ಭೂಗತ ಕಾಲುವೆ ಒಡೆದಿರುವ ಶಂಕೆಯುಂಟಾಗಿದ್ದು,ನೀರಿನ ಹರಿವು ಹೆಚ್ಚಾಗಿದೆ. ಎರಡು ದಿನಗಳಿಂದ ಈ ಪ್ರದೇಶದಲ್ಲಿ ನೀರಿನ ಹರಿವು ತಾತ್ಕಾಲಿಕವಾಗಿ ತಗ್ಗಿತ್ತು. ಇಲ್ಲಿ ಜ.2ರಿಂದ ನಿರಂತರವಾಗಿ ಕೆಸರುಮಿಶ್ರಿತ ನೀರು ಒಸರುತ್ತಿದ್ದು,ಅದರ ಮೂಲದ ಬಗ್ಗೆ ತಜ್ಞರಿಗೆ ಖಚಿತವಿಲ್ಲ. ಇಲ್ಲಿ ನೀರಿನ ಹರಿವು ಪ್ರತಿ ನಿಮಿಷಕ್ಕೆ 190 ಲೀ.ಇದ್ದುದು ಈಗ 240 ಲೀ.ಗೆ ಹೆಚ್ಚಿದೆ. ಆರಂಭದಲ್ಲಿ ಪ್ರತಿ ನಿಮಿಷಕ್ಕೆ 550 ಲೀ.ಗಳಿದ್ದ ಅದು ಜ.13ರಂದು 190 ಲೀ.ಗೆ ಇಳಿದಿತ್ತು.

ನೀರಿನ ಹರಿವಿನ ವೇಗದ ಮೇಲೆ ನಿರಂತರ ನಿಗಾಯಿರಿಸಲಾಗಿದೆ ಎಂದು ವಿಪತ್ತು ನಿರ್ವಹಣೆ ಕಾರ್ಯದರ್ಶಿ ರಂಜಿತ ಕುಮಾರ ಸಿನ್ಹಾ ತಿಳಿಸಿದರು.

ಈ ನಡುವೆ ಅಸುರಕ್ಷಿತವೆಂದು ಘೋಷಿಸಲಾದ ಅಕ್ಕಪಕ್ಕದಲ್ಲಿರುವ ಮಲಾರಿ ಇನ್ ಮತ್ತು ವೌಂಟ್ ವ್ಯೆ ಹೋಟೆಲ್ಗಳ ಧ್ವಂಸ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಈ ಸ್ಥಳದಿಂದ ಸುಮಾರು 100 ಮೀ.ಅಂತರದಲ್ಲಿರುವ ಸ್ನೋ ಕ್ರೆಸ್ಟ್ ಮತ್ತು ಕಾಮೆಟ್ ಹೋಟೆಲ್ ಗಳೂ ಪರಸ್ಪರರತ್ತ ಅಪಾಯಕಾರಿಯಾಗಿ ವಾಲಿದ್ದು, ಮುಂಜಾಗ್ರತೆ ಕ್ರಮವಾಗಿ ಅವುಗಳನ್ನು ತೆರವುಗೊಳಿಸಲಾಗಿದೆ.

ಎರಡು ಹೋಟೆಲ್ಗಳ ನಡುವಿನ ಅಂತರವು ಮೊದಲು ನಾಲ್ಕು ಅಡಿಗಳಷ್ಟಿತ್ತು. ಆದರೆ ಈಗ ಕೆಲವೇ ಇಂಚುಗಳಷ್ಟಿದ್ದು,ಅವುಗಳ ಛಾವಣಿಗಳು ಪರಸ್ಪರ ಸ್ಪರ್ಶಿಸಿವೆ ಎಂದು ಸ್ನೋ ಕ್ರೆಸ್ಟ್ ಮಾಲಿಕರ ಪುತ್ರಿ ಪೂಜಾ ಪ್ರಜಾಪತಿ ತಿಳಿಸಿದರು.

ಜೋಶಿಮಠ-ಔಲಿ ರೋಪ್ವೇ ಬಳಿ ಅಗಲವಾದ ಬಿರುಕುಗಳು ಕಾಣಿಸಿಕೊಂಡಿವೆ. ಈ ರೋಪ್ ವೇ ಕಾರ್ಯಾಚರಣೆಯನ್ನು ವಾರದ ಹಿಂದೆಯೇ ಸ್ಥಗಿತಗೊಳಿಸಲಾಗಿತ್ತು.

ಏಶ್ಯಾದಲ್ಲಿ ಅತ್ಯಂತ ದೊಡ್ಡದೆಂದು ಪರಿಗಣಿಸಲಾಗಿರುವ 4.5 ಕಿ.ಮೀ.ಉದ್ದದ ರೋಪ್ವೇ 6000 ಅಡಿ ಎತ್ತರದಲ್ಲಿರುವ ಜೋಶಿಮಠವನ್ನು 9000 ಅಡಿ ಎತ್ತರದಲ್ಲಿರುವ ಔಲಿಯ ಸ್ಕೀಯಿಂಗ್ ತಾಣದೊಂದಿಗೆ ಸಂಪರ್ಕಿಸುತ್ತದೆ.

ಪ್ರದೇಶದಲ್ಲಿರುವ ಬಿರುಕುಗಳು ಶನಿವಾರ ರಾತ್ರಿ ಇನ್ನಷ್ಟು ಅಗಲಗೊಂಡಿವೆ ಎಂದು ಸಿಂಗಧಾರ್ ವಾರ್ಡ್ನ ಹೋಟೆಲ್ ಮಾಲಿಕರೋರ್ವರು ತಿಳಿಸಿದರು.

ಪಟ್ಟಣದಲ್ಲಿಯ ಹಲವಾರು ಮನೆಗಳಿಗೆ ಹಾನಿಯುಂಟಾಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗುತ್ತಿದೆ.

ಈ ನಡುವೆ ಜೋಶಿಮಠದಲ್ಲಿಯ ಭೂಕುಸಿತಗಳನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಕೋರಿ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ನಡೆಸಲಿದೆ.

ಇದನ್ನು ಓದಿ: ಭಾರತ್‌ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಹತ್ಯೆಗೀಡಾದ ಗಾಯಕ ಸಿಧು ಮೂಸೆವಾಲ ತಂದೆ

Similar News