ಬದಿಯಡ್ಕದಲ್ಲಿ ಸಾಹಿತ್ಯಾಭಿಮಾನಿಗಳಿಂದ ಸಾರಾ ಅಬೂಬಕರ್ ಗೆ ನುಡಿನಮನ

Update: 2023-01-16 12:24 GMT

ಕಾಸರಗೋಡು: ಶೋಷಿತ ಜನರ ಧ್ವನಿಯಾಗಿ ಸಾಮಾಜಿಕ ಕ್ರಾಂತಿಯ ಸಾಹಿತ್ಯ ಜಾಗೃತಿಯನ್ನು ಮೂಡಿಸುವ ಮೂಲಕ ಸಾರ ಅಬೂಬಕ್ಕರ್ ಬದುಕಿನ ಸಾರಂಶದಲ್ಲೂ ಆದರ್ಶತೆಯನ್ನೆ ಮೆರೆದಿದ್ದಾರೆ ಎಂದು ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಅಭಿಪ್ರಾಯಪಟ್ಟರು. ಅವರು ಬದಿಯಡ್ಕದ ಸೀತಾರಾಮ ಸಮುಚ್ಛಯದಲ್ಲಿ ಸಾಹಿತ್ಯಾಭಿಮಾನಿಗಳು ಬದಿಯಡ್ಕದ ವತಿಯಿಂದ ನಡೆದ ಸಾರಾ ಅಬೂಬಕ್ಕರ್ ನುಡಿ ನಮನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಗಡಿನಾಡು ಕಾಸರಗೋಡಿನಿಂದ ಅಖಿಲ ಭಾರತೀಯ ಸಾಹಿತ್ಯ ಮಟ್ಟದಲ್ಲಿ ಜನಪರ ಬೆಳಕು ಚೆಲ್ಲಲು ಪ್ರಯತ್ನಿಸಿದ ನಾಡೋಜ ಸಾರ ಅವರ ಗಮನಾರ್ಹ ಸಾಧನೆಯನ್ನು ಕಾಸರಗೋಡಿನ ಜನತೆ ಗುರುತಿಸದಿರುವುದು ಅತ್ಯಂತ ಖೇದಕರವಾಗಿದ್ದು ಬದುಕಿದ್ದಾಗಲೂ ಬಳಿಕವೂ ಅವರ ಕತೆ,ಕಾದಂಬರಿಗಳು ವರ್ತಮಾನದ ತುಮುಲಕ್ಕೆ ಕೈಗನ್ನಡಿ ಹಿಡಿಯುವಂತಾಗಿಸಿದ್ದಾರೆ ಎಂದರು.

ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕವಿ, ಪ್ರಗತಿಪರ ಕೃಷಿಕ ದಯಾನಂದ ರೈ ಕಳ್ವಾಜೆ ಕವನದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಅಂಬೇಡ್ಜರ್ ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ, ಬೊಳಿಕೆ ಜಾನಪದ ಕಲಾ ತಂಡದ ನಿರ್ದೇಶಕ ಶಂಕರ ಸ್ವಾಮಿಕೃಪಾ, ರುಟ್ರೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರದ ಕಿಶೋರ್ ಕುಮಾರ್, ಕವಯತ್ರಿ ನಿರ್ಮಲಾ ಶೇಷಪ್ಪ, ಪದ್ಮಾವತಿ ಏದಾರ್, ವನಜಾಕ್ಷಿ ಚಂಬ್ರಕಾನ, ಚಂದ್ರಕಲಾ ಟೀಚರ್ ಮೊದಲಾದವರು ನುಡಿ ನಮನ ಸಲ್ಲಿಸಿದರು.ಸುಂದರ ಬಾರಡ್ಕ ಸ್ವಾಗತಿಸಿ ಪ್ರಸ್ತಾವನೆಗೈದರು. ಜಯ ಮಣಿಯಂಪಾರೆ ವಂದಿಸಿದರು.

Similar News