ಮಗಳ ಮದುವೆಗೆ ಹಾಜರಾಗಲು ಉನ್ನಾವೊ ಅತ್ಯಾಚಾರ ಆರೋಪಿಗೆ ಜಾಮೀನು

Update: 2023-01-16 15:49 GMT

ಹೊಸದಿಲ್ಲಿ, ಜ. 16: ಉತ್ತರಪ್ರದೇಶದ ಉನ್ನಾವೊದಲ್ಲಿ 2017ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಉಚ್ಚಾಟಿತ ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ  ಕುಲದೀಪ್ ಸಿಂಗ್ ಸೆಂಗಾರ್(Kuldeep Singh Sengar) ಗೆ ತನ್ನ ಮಗಳ ಮದುವೆಗೆ ಹಾಜರಾಗಲು ಸಾಧ್ಯವಾಗುವಂತೆ ದಿಲ್ಲಿ ಹೈಕೋರ್ಟ್(High Court of Delhi) ಸೋಮವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ನ್ಯಾಯಮೂರ್ತಿಗಳಾದ ಮುಕ್ತಾ ಗುಪ್ತಾ ಮತ್ತು ಪೂನಮ್ ಎ. ಬಾಂಬ ಅವರನ್ನೊಳಗೊಂಡ ನ್ಯಾಯಪೀಠವೊಂದು, ಸೆಂಗರ್ರ ಶಿಕ್ಷೆಯನ್ನು ಜನವರಿ 27ರಿಂದ ಫೆಬ್ರವರಿ 10ರವರೆಗೆ ಅಮಾನತಿನಲ್ಲಿಟ್ಟಿತು ಹಾಗೂ ಜಾಮೀನು ಅವಧಿಯಲ್ಲಿ ಸಂಬಂಧಿತ ಪೊಲೀಸ್ ಠಾಣೆಗೆ ಪ್ರತಿ ದಿನ ಹಾಜರಾಗುವಂತೆ ದೋಷಿಗೆ ಸೂಚಿಸಿತು. ಜೊತೆಗೆ, ತಲಾ ಒಂದು ಲಕ್ಷ ರೂಪಾಯಿಗಳ ಎರಡು ಭದ್ರತೆಗಳನ್ನು ಒದಗಿಸುವಂತೆ ಹೇಳಿತು.

ಮದುವೆ ಫೆಬ್ರವರಿ 8ರಂದು ನಡೆಯಲಿದೆ ಎಂದು ಸೆಂಗರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮನೆಯಲ್ಲಿ ಗಂಡಸರು ಯಾರೂ ಇಲ್ಲದಿರುವುದರಿಂದ ಎಲ್ಲಾ ವ್ಯವಸ್ಥೆಗಳನ್ನು ನಾನೇ ಮಾಡಬೇಕಾಗಿದೆ ಎಂಬುದಾಗಿಯೂ ಅವರು ಹೇಳಿದ್ದಾರೆ.

ಸೆಂಗರ್ ತನ್ನ ಉಳಿದ ಜೀವಿತಾವಧಿಯನ್ನು ಜೈಲಿನಲ್ಲಿ ಕಳೆಯಬೇಕು ಎಂಬುದಾಗಿ ವಿಚಾರಣಾ ನ್ಯಾಯಾಲಯವೊಂದು 2019 ಡಿಸೆಂಬರ್ 20ರಂದು ತೀರ್ಪು ನೀಡಿದೆ. ಈ ಆದೇಶವನ್ನು ರದ್ದುಪಡಿಸಬೇಕೆಂದು ಕೋರಿ ಸೆಂಗರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಹೈಕೋರ್ಟ್ನಲ್ಲಿ ಬಾಕಿಯಿದೆ.

ಸೆಂಗರ್ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ್ದನು ಎಂದು ಆರೋಪಿಸಲಾಗಿದೆ. ವಿಚಾರಣೆಯನ್ನು ಸುಪ್ರೀಂ ಕೋರ್ಟ್ನ ಸೂಚನೆಯಂತೆ ಉನ್ನಾವೊದಿಂದ ದಿಲ್ಲಿಯ ನ್ಯಾಯಾಲಯವೊಂದಕ್ಕೆ ವರ್ಗಾಯಿಸಲಾಗಿತ್ತು.

Similar News