ನೇಪಾಳ: ಪತನಗೊಂಡಿದ್ದ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ

Update: 2023-01-16 16:45 GMT

ಕಠ್ಮಂಡು, ಜ.16: ನೇಪಾಳದಲ್ಲಿ ರವಿವಾರ ಬೆಳಿಗ್ಗೆ ಪತನಗೊಂಡಿದ್ದ ಯೇತಿ ಏರ್ಲೈನ್ಸ್ ವಿಮಾನದ ಬ್ಲ್ಯಾಕ್ ಬಾಕ್ಸ್ ಅನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಬ್ಲ್ಯಾಕ್ ಬಾಕ್ಸ್ ಉತ್ತಮ ಸ್ಥಿತಿಯಲ್ಲಿದ್ದು ಪ್ರವಾಸೀ ನಗರವಾದ ಪೋಖರ ನಗರದಲ್ಲಿ ಇಳಿಯಲು ಕೆಲವೇ ನಿಮಿಷ ಬಾಕಿಯಿದ್ದಾಗ ಅವಳಿ ಇಂಜಿನ್ನ ವಿಮಾನ ಪತನಗೊಳ್ಳಲು ಕಾರಣವೇನು ಎಂಬುದನ್ನು ಕಂಡುಹಿಡಿಯಲು ತನಿಖಾಧಿಕಾರಿಗಳಿಗೆ ಸಹಾಯ ಮಾಡಬಹುದು ಎಂದು ಕಠ್ಮಂಡು ವಿಮಾನ ನಿಲ್ದಾಣದ ಸಿಬಂದಿ ಟೇಕನಾಥ್ ಸಿತೌಲರನ್ನು ಉಲ್ಲೇಖಿಸಿ ‘ರಾಯ್ಟರ್ಸ್’ ವರದಿ ಮಾಡಿದೆ.

ಪೋಖರಾದಲ್ಲಿ ಹೊಸದಾಗಿ ಉದ್ಘಾಟನೆಗೊಂಡಿದ್ದ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಸಮಯದಲ್ಲಿ ವಿಮಾನ ನದಿ ಪಕ್ಕದ ಕಮರಿಗೆ ಪತನಗೊಂಡಿತ್ತು. ಸೋಮವಾರ ಮೋಡ ಕವಿದ ವಾತಾವರಣದಿಂದ ಗೋಚರತೆ ಕಡಿಮೆಯಾಗಿದ್ದರೂ ಬದುಕುಳಿದವರಿಗಾಗಿ ಶೋಧ ಕಾರ್ಯಾಚರಣೆಯನ್ನು ರಕ್ಷಣಾ ತಂಡ ನಡೆಸಿದೆ. ವಿಮಾನದಲ್ಲಿ 5 ಮಂದಿ ಭಾರತೀಯರು ಸೇರಿದಂತೆ 68 ಪ್ರಯಾಣಿಕರು ಹಾಗೂ ಮತ್ತು ನಾಲ್ವರು ಸಿಬಂದಿಗಳಿದ್ದರು. ಬದುಕುಳಿದವರ ಬಗ್ಗೆ ಇದುವರೆಗೆ ಯಾವುದೇ ಮಾಹಿತಿಯಿಲ್ಲ. ವಿಮಾನದಲ್ಲಿದ್ದ ಪ್ರಯಾಣಿಕರ ಕುಟುಂಬವನ್ನು ಸಂಪರ್ಕಿಸಲಾಗುತ್ತಿದೆ ಎಂದು ಯೇತಿ ಏರ್ಲೈನ್ಸ್ ವಕ್ತಾರ ಸುದರ್ಶನ್ ಬರ್ತೌಲಾ ಹೇಳಿದ್ದಾರೆ. ಇದುವರೆಗೆ 68 ಮೃತದೇಹಗಳು ಪತ್ತೆಯಾಗಿದ್ದು ಇನ್ನೂ ನಾಲ್ವರ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಪವಾಡ ನಡೆದು ಅವರು ಬದುಕಲಿ ಎಂಬುದು ನಮ್ಮ ಹಾರೈಕೆಯಾಗಿದೆ. ಆದರೆ ಯಾರೂ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ತಕ್ಸಿ ಜಿಲ್ಲಾಧಿಕಾರಿ ತೇಕ್ ಬಹಾದುರ್ ಕೆಸಿ ಹೇಳಿದ್ದಾರೆ.

Similar News