ಅಬುಧಾಬಿ ದೊರೆ ಕುಟುಂಬದ ಉದ್ಯೋಗಿ ಎಂದು ನಟಿಸಿ ಹೋಟೆಲ್‌ ನಲ್ಲಿ ರೂ. 23 ಲಕ್ಷ ಬಿಲ್ ಬಾಕಿಯುಳಿಸಿ ವ್ಯಕ್ತಿ ಪರಾರಿ

Update: 2023-01-17 08:57 GMT

ಹೊಸದಿಲ್ಲಿ: ಅಬುಧಾಬಿ ದೊರೆಗಳ ಕುಟುಂಬದ ಉದ್ಯೋಗಿ ಎಂದು ಸೋಗು ಹಾಕಿದ್ದ ವ್ಯಕ್ತಿಯೊಬ್ಬ ದಿಲ್ಲಿಯ ಐಷಾರಾಮಿ ಹೋಟೆಲ್‌ನಲ್ಲಿ ನಾಲ್ಕು ತಿಂಗಳ ಕಾಲ ವಾಸ್ತವ್ಯ ಹೂಡಿ, ರೂ. 23 ಲಕ್ಷ ಬಿಲ್ ಬಾಕಿಯುಳಿಸಿ ಪರಾರಿಯಾಗಿದ್ದಾನೆ ಎಂದು ndtv.com ವರದಿ ಮಾಡಿದೆ.

ಶನಿವಾರ ಈ ಕುರಿತು ಲೀಲಾ ಪ್ಯಾಲೇಸ್ ಹೋಟೆಲ್ ಆಡಳಿತ ಮಂಡಳಿ ಸಲ್ಲಿಸಿರುವ ದೂರನ್ನು ಆಧರಿಸಿ, ಮುಹಮ್ಮದ್ ಶರೀಫ್ ಎಂಬ ವ್ಯಕ್ತಿಯ ವಿರುದ್ಧ ವಂಚನೆ ಮತ್ತು ಕಳವು ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು, ಆತನಿಗಾಗಿ ಶೋಧ ಕೈಗೊಂಡಿದ್ದಾರೆ.

ಆಗಸ್ಟ್ 1ರಂದು ಲೀಲಾ ಪ್ಯಾಲೇಸ್‌ನ ಕೊಠಡಿ ಸಂಖ್ಯೆ 427ರಲ್ಲಿ ವಾಸ್ತವ್ಯ ಹೂಡಿರುವ ಶರೀಫ್, ನವೆಂಬರ್ 20ರಂದು ಯಾವುದೇ ಸುಳಿವು ನೀಡದೆ ಹೋಟೆಲ್‌ನಿಂದ ಪರಾರಿಯಾಗಿದ್ದಾನೆ. ಈ ವೇಳೆ ಕೊಠಡಿಯಲ್ಲಿದ್ದ ಬೆಳ್ಳಿ ಪಾತ್ರೆಗಳು ಮತ್ತು ಮುತ್ತಿನ ಹರಿವಾಣ ಸೇರಿದಂತೆ ಹಲವಾರು ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆ ಎಂದು ಹೋಟೆಲ್ ಸಿಬ್ಬಂದಿ ದೂರಿದ್ದಾರೆ.

ಆಗಸ್ಟ್‌ನಲ್ಲಿ ಹೋಟೆಲ್‌ಗೆ ಬಂದಿರುವ ಶರೀಫ್, ತಾನು ಯುಎಇ ನಿವಾಸಿಯಾಗಿದ್ದು, ಅಬುಧಾಬಿ ದೊರೆಗಳ ಕುಟುಂಬಕ್ಕೆ ಸೇರಿದ ಶೇಖ್ ಫಲಾ ಬಿನ್ ಝಾಯೇದ್ ಅಲ್ ನಹ್ಯಾನ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ತಾನು ಶೇಖ್ ಅವರೊಂದಿಗೆ ಖಾಸಗಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅಧಿಕೃತ ವ್ಯವಹಾರದ ನಿಮಿತ್ತ ಭಾರತಕ್ಕೆ ಬಂದಿದ್ದೇನೆ ಎಂದೂ ಹೇಳಿಕೊಂಡಿದ್ದಾನೆ. ತನ್ನ ಇತಿಹಾಸವನ್ನು ಪುಷ್ಟೀಕರಿಸಲು ಆತ ತನ್ನ ವ್ಯವಹಾರ ಚೀಟಿ, ಯುಎಇ ನಿವಾಸಿ ಚೀಟಿ ಮತ್ತಿತರ ದಾಖಲೆಗಳನ್ನು ಒದಗಿಸಿದ್ದಾನೆ. ತನ್ನ ಕತೆಗಳನ್ನು ನಂಬಿಸಲು ಆತ ತನ್ನ ಯುಎಇ ಬದುಕಿನ ಕುರಿತು ಹೋಟೆಲ್ ಸಿಬ್ಬಂದಿಯೊಂದಿಗೆ ಪ್ರತಿ ನಿತ್ಯ ಸಂಭಾಷಿಸಿದ್ದಾನೆ.

ಪೊಲೀಸರು ಆತ ಒದಗಿಸಿರುವ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಅವು ನಕಲಿಯಾಗಿರಬಹುದು ಎಂದು ಶಂಕಿಸಿದ್ದಾರೆ.

ಆತನ ನಾಲ್ಕು ತಿಂಗಳ ಕೊಠಡಿ ವಾಸ್ತವ್ಯ ಹಾಗೂ ಸೇವೆಗಳ ಬಿಲ್ ಮೊತ್ತ ರೂ. 35 ಲಕ್ಷ ಆಗಿದ್ದು, ಈ ಪೈಕಿ ಕೇವಲ ರೂ. 1.5 ಲಕ್ಷ ಪಾವತಿಸಿರುವ ಆತ, ಉಳಿದ ಮೊತ್ತವನ್ನು ಬಾಕಿಯುಳಿಸಿ ಪರಾರಿಯಾಗಿದ್ದಾನೆ. ಆತ ಹೋಟೆಲ್ ಸಿಬ್ಬಂದಿಗೆ ನವೆಂಬರ್ 20ರ ದಿನಾಂಕ ನಮೂದಿಸಿರುವ ರೂ. 20 ಲಕ್ಷ ಮೊತ್ತದ ಚೆಕ್ ನೀಡಿದ್ದು, ಅಂದೇ ಆತ ಹೋಟೆಲ್‌ನಿಂದ ಪರಾರಿಯಾಗಿದ್ದಾನೆ.

ಆತನ ಗುರುತು ಪತ್ತೆ ಹಚ್ಚಲು ದಿಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ: ಬುರ್ಖಾ ಧರಿಸಿ, ಬೆನ್ನಿನ ಹಿಂಭಾಗಕ್ಕೆ ಸ್ವಿಗ್ಗಿ ಬ್ಯಾಗ್ ಹೇರಿಕೊಂಡು ಹೋಗುತ್ತಿರುವ ಮಹಿಳೆಯ ಬದುಕು ಹೀಗಿದೆ... 

Similar News