ಮಧುರೈ: ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಇಬ್ಬರು ಮೃತ್ಯು: ತಲಾ ರೂ. 3 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸ್ಟಾಲಿನ್

Update: 2023-01-17 07:51 GMT

ಮಧುರೈ: ತಮಿಳುನಾಡಿನ ಮಧುರೈ ಜಿಲ್ಲೆಯ ಪಲಮೇಡು ಗ್ರಾಮದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಜಲ್ಲಿಕಟ್ಟು ಸ್ಪರ್ಧೆಯ ವೇಳೆ ಹೋರಿಯೊಂದು ತನನ್ನು ಮಣಿಸಲು ಬಂದ ಸ್ಪರ್ಧಿಯನ್ನು ಕೊಂಬಿನಿಂದ ತಿವಿದಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ 26 ವರ್ಷದ ಹೋರಿ ಸವಾರನೊಬ್ಬ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.

ಮೃತ ವ್ಯಕ್ತಿಯನ್ನು ಅರವಿಂದ್ ರಾಜ್ ಎಂದು ಗುರುತಿಸಲಾಗಿದ್ದು, ಇದಕ್ಕೂ ಮುನ್ನ ನಡೆದಿದ್ದ ಮೂರು ಸುತ್ತಿನಲ್ಲಿ ಆತ ಒಂಬತ್ತು ಹೋರಿಗಳನ್ನು ಮಣಿಸಿದ್ದ ಎಂದು ಹೇಳಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಆತ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.

ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅಂಕಣ ಪ್ರವೇಶದಿಂದ ಹೊರ ಬರುವ ಹೋರಿಯು ಆತನನ್ನು ಕೊಂಬಿನಿಂದ ತಿವಿದು ಮೇಲೆತ್ತಿರುವುದು ಸೆರೆಯಾಗಿದೆ. ಪಲಮೇಡುನಲ್ಲಿ ಗಾಯಾಳುಗಳನ್ನು ಹೊರತುಪಡಿಸಿ, ಹತ್ತಕ್ಕೂ ಹೆಚ್ಚು ಮಂದಿಯನ್ನು ಸರ್ಕಾರಿ ರಾಜಾಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ತಿರುಚಿರಾಪಳ್ಳಿ ಜಿಲ್ಲೆಯ ತಿರುವೆರುಂಬುರ್ ಬ್ಲಾಕ್ ಬಳಿಯಿರುವ ಸುರಿಯೂರ್ ಗ್ರಾಮದಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ವೀಕ್ಷಿಸಲು ಬಂದಿದ್ದ ಪುದುಕೋಟೈ ನಿವಾಸಿ ಎಂ‌.ಅರವಿಂದ್ ಎಂಬುವನನ್ನು ಹೋರಿಯು ಕೊಂಬಿನಿಂದ ತಿವಿದಿದೆ. ಅದರಿಂದ ತೀವ್ರವಾಗಿ ಗಾಯಗೊಂಡಿದ್ದ ಆತ ಆಸ್ಪತ್ರೆಯಲ್ಲಿ ಅಸು ನೀಗಿದ್ದಾನೆ. ಈ ದುರ್ಘಟನೆಗಳ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಮೃತರ ಕುಟುಂಬದ ಸದಸ್ಯರಿಗೆ ತಲಾ ರೂ. 3 ಲಕ್ಷ ಪರಿಹಾರ ಪ್ರಕಟಿಸಿದ್ದಾರೆ.

ಜಲ್ಲಿಕಟ್ಟು ಸ್ಪರ್ಧೆ ಆಯೋಜಕರ ಪ್ರಕಾರ, ಸ್ಥಳದಲ್ಲಿ ಏಕಕಾಲಕ್ಕೆ 25 ಹೋರಿಗಳು ಹಾಜರಿರುತ್ತವೆ ಮತ್ತು ಹೋರಿಗಳನ್ನು ಒಂದರ ನಂತರ ಒಂದರಂತೆ ಅಂಕಣಕ್ಕೆ ಬಿಡಲಾಗುತ್ತದೆ. 45 ನಿಮಿಷದ ನಂತರ ಹೋರಿ ಮಣಿಸುವವರ ಮತ್ತೊಂದು  ಗುಂಪು ಅಂಕಣವನ್ನು ಪ್ರವೇಶಿಸುತ್ತದೆ ಎಂದು ಹೇಳಿದ್ದಾರೆ.

ಪಲಮೇಡುನಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಲು 700 ಹೋರಿಗಳಿಗೆ ಅನುಮತಿ ನೀಡಲಾಗಿತ್ತು. ಹೋರಿ ಮಣಿಸುವವರು ಹಾಗೂ ಹೋರಿಗಳಿಗೆ ಚಿಕಿತ್ಸೆ ನೀಡಲು ಸ್ಥಳದಲ್ಲಿ ಸುಮಾರು 160 ಸಂಚಾರಿ ವೈದ್ಯಕೀಯ ಘಟಕ ಹಾಗೂ ಪಶು ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿತ್ತು.

ಇದರೊಂದಿಗೆ, 2000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಪ್ರತಿ ಸುತ್ತಿನಲ್ಲಿ ವಿಜೇತರಾಗುವ ಸ್ಪರ್ಧಿಗಳಿಗೆ ಚಿನ್ನದ ನಾಣ್ಯ, ದ್ವಿಚಕ್ರ ವಾಹನಗಳು, ಬೈಸಿಕಲ್‌ಗಳು, ಪೀಠೋಪಕರಣಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಉಡುಗೊರೆ ನೀಡಲಾಗುತ್ತದೆ. ಸಮಗ್ರ ಸ್ಪರ್ಧೆಯಲ್ಲಿ ವಿಜೇತರಾಗುವ ಸ್ಪರ್ಧಿಗಳಿಗೆ ಭಾರಿ ಬಹುಮಾನ ನೀಡಲಾಗುತ್ತದೆ.

Similar News