ಚುನಾವಣೆಗೆ 400 ದಿನಗಳು ಮಾತ್ರ ಬಾಕಿ: ಕಾರ್ಯಕರ್ತರಿಗೆ ಎಚ್ಚರಿಸಿದ ನರೇಂದ್ರ ಮೋದಿ

Update: 2023-01-17 16:33 GMT

 ಹೊಸದಿಲ್ಲಿ, ಜ. 17: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು 2024ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಸಿದ್ಧರಾಗುವಂತೆ ಎಚ್ಚರಿಸಿದ್ದಾರೆ. ಅಲ್ಲದೆ, ಮತದಾರರನ್ನು ತಲುಪುವುದನ್ನು ಹೆಚ್ಚಿಸುವಂತೆ ಪಕ್ಷದ ನಾಯಕರನ್ನು ಆಗ್ರಹಿಸಿದ್ದಾರೆ.

‘‘ನಮಗೆ 400 ದಿನಗಳು ಇವೆ (ಲೋಕಸಭಾ ಚುನಾವಣೆ ವರೆಗೆ) ಹಾಗೂ ನಾವು ಜನರಿಗೆ ಸೇವೆ ನೀಡಲು ಎಲ್ಲವನ್ನೂ ಮಾಡಬೇಕು. ನಾವು ಇತಿಹಾಸ ಸೃಷ್ಟಿಸಬೇಕು’’ ಎಂದು ನರೇಂದ್ರ ಮೋದಿ ಅವರು ಬಿಜೆಪಿಯ ಎರಡು ದಿನಗಳ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭದಲ್ಲಿ ಹೇಳಿರುವುದಾಗಿ ಬಿಜೆಪಿಯ ಹಿರಿಯ ನಾಯಕ ದೇವೇಂದ್ರ ಫಡ್ನಾವಿಸ್(Devendra Fadnavis) ಉಲ್ಲೇಖಿಸಿದ್ದಾರೆ. ನಾವು 18ರಿಂದ 25 ಪ್ರಾಯ ಗುಂಪಿನ ಯುವಕರ ಬಗ್ಗೆ ಗಮನ ಕೇಂದ್ರೀಕರಿಸಬೇಕು ಎಂದು ಮೋದಿ ಅವರು ಹೇಳಿದ್ದಾರೆ ಎಂದು ಫಡ್ನಾವಿಸ್ ತಿಳಿಸಿದರು.

‘‘ಅವರಿಗೆ ಇತಿಹಾಸ, ಹಿಂದಿನ ಸರಕಾರಗಳ ದುರಾಡಳಿತದ ಬಗ್ಗೆ ಹಾಗೂ ನಾವು ಹೇಗೆ ಉತ್ತಮ ಆಡಳಿತದತ್ತ ಸಾಗುತ್ತಿದ್ದೇವೆ ಎಂಬ ಬಗ್ಗೆ ಅರಿವಿಲ್ಲ. ನಾವು ಅವರಿಗೆ ಅರಿವು ಮೂಡಿಸಬೇಕು ಹಾಗೂ ಅವರಿಗೆ ಪ್ರಜಾಸತ್ತಾತ್ಮಕ ಮಾರ್ಗಗಳನ್ನು ಪರಿಚಯಿಸಬೇಕು. ಅಲ್ಲದೆ, ಉತ್ತಮ ಆಡಳಿತದ ಭಾಗವಾಗಲು ಅವರಿಗೆ ನೆರವು ನೀಡಬೇಕು ಎಂದು ಮೋದಿ ಹೇಳಿದ್ದಾರೆ’’ ಎಂದು ಅವರು ತಿಳಿಸಿದರು. ಗಡಿ ಪ್ರದೇಶ ಸೇರಿದಂತೆ ಗ್ರಾಮಗಳಲ್ಲಿ ಪಕ್ಷವನ್ನು ಸುದೃಢಗೊಳಿಸಲು ಪಕ್ಷ ಗಮನ ಕೇಂದ್ರೀಕರಿಸಬೇಕು.

ಅಲ್ಲದೆ, ಪಕ್ಷದ ನಾಯಕರು ಎಲ್ಲ ಕ್ಷೇತ್ರಗಳ ಜನರನ್ನು ಭೇಟಿಯಾಗಬೇಕು ಎಂದು ಪ್ರಧಾನಿ ಅವರನ್ನು ಉಲ್ಲೇಖಿಸಿ ಫಡ್ನವಿಸ್ ಹೇಳಿದರು. ಬೊಹ್ರಾ, ಪಸ್ಮಂಡ ಹಾಗೂ ಸಿಕ್ಖ್ನಂತಹ ಅಲ್ಪಸಂಖ್ಯಾತರು ಸೇರಿದಂತೆ ಸಮಾಜ ಪ್ರತಿಯೊಂದು ವರ್ಗವನ್ನು ತಲುಪುವಂತೆ ಅವರು ಬಿಜೆಪಿ ಸದಸ್ಯರಿಗೆ ಸೂಚಿಸಿದರು. ‘‘ಬಿಜೆಪಿ ಇನ್ನು ಮುಂದೆ ಕೇವಲ ರಾಜಕೀಯ ಆಂದೋಲನ ಮಾತ್ರವಲ್ಲ, ಸಾಮಾಜಿಕ ಆಂದೋಲನ ಕೂಡ ಆಗಿದೆ. 

ಆದುದರಿಂದ ಬಿಜೆಪಿ ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು ಪರಿವರ್ತಿಸಲು ಕೂಡ ಕೆಲಸ ಮಾಡುತ್ತದೆ’’ ಎಂದು ಸಭೆಯಲ್ಲಿ ಪಾಲ್ಗೊಂಡ ಸಚಿವರು, ನಾಯಕರು ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು. ಭಾರತಕ್ಕೆ ಅತ್ಯುತ್ತಮ ಕಾಲ ಬರುತ್ತಿದೆ. ನಮ್ಮನ್ನು ನಾವು ದೇಶದ ಅಭಿವೃದ್ಧಿಗೆ ಅರ್ಪಿಸಿಕೊಳ್ಳಬೇಕು ಎಂದು ಮೋದಿ ಹೇಳಿದರು. ಜೆ.ಪಿ. ನಡ್ಡಾ ಅಧಿಕಾರಾವಧಿ ವಿಸ್ತರಣೆ: ಈ ಸಂದರ್ಭ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರ ಅಧಿಕಾರಾವಧಿಯನ್ನು ಮುಂದಿನ ವರ್ಷ ಜೂನ್ ವರೆಗೆ ವಿಸ್ತರಿಸಲಾಯಿತು. 

Similar News