ಅಮೆರಿಕಾ: ಗುಂಡಿನ ದಾಳಿಯಲ್ಲಿ 8 ಮಂದಿಗೆ ಗಾಯ
Update: 2023-01-17 22:23 IST
ವಾಷಿಂಗ್ಟನ್, ಜ.17: ಅಮೆರಿಕಾದ ಫ್ಲೋರಿಡಾದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಮಾರ್ಟಿನ್ ಲೂಥರ್ ಕಿಂಗ್ ದಿನಾಚರಣೆಯಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ 8 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಕಾರುಗಳ ಪ್ರದರ್ಶ, ನೃತ್ಯ, ಮಕ್ಕಳಿಂದ ವಿನೋದಾವಳಿ ಇತ್ಯಾದಿ ಕಾರ್ಯಕ್ರಮಗಳಲ್ಲಿ ಜನರು ಸಂಭ್ರಮಿಸುತ್ತಿದ್ದಾಗ ಏಕಾಏಕಿ ಗುಂಡಿನ ದಾಳಿ ಆರಂಭವಾಗಿದ್ದು ಸೇರಿದ್ದ ಜನ ದಿಕ್ಕೆಟ್ಟು ಓಡಿದರು. ಜನರ ಕಾಲ್ತುಳಿತಕ್ಕೆ ಸಿಲುಕಿ ಒಬ್ಬ ಬಾಲಕ ಗಾಯಗೊಂಡಿದ್ದಾನೆ. ಇತರ 7 ಮಂದಿಗೆ ಗುಂಡಿನ ಗಾಯವಾಗಿದೆ. ಹಲವರು ಕಾರಿನ ಹಿಂದೆ ಅಡಗಿಕೊಂಡರು. ದುಷ್ಕರ್ಮಿಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರಕಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.