2020ರ ಮಾರ್ಚ್ ಬಳಿಕ ಇದೇ ಮೊದಲು: ದಿನಕ್ಕೆ 100ಕ್ಕಿಂತ ಕೆಳಗಿಳಿದ ಕೋವಿಡ್ ಪ್ರಕರಣ

Update: 2023-01-18 03:20 GMT

ಹೊಸದಿಲ್ಲಿ: ದೇಶದಲ್ಲಿ ಮೊದಲ ಬಾರಿಗೆ ಕೋವಿಡ್-19 ಸೋಂಕು ಪ್ರಕರಣ ಹೆಚ್ಚಳ ಆರಂಭವಾದ 2020ರ ಮಾರ್ಚ್ ಬಳಿಕ ಇದೇ ಮೊದಲ ಬಾರಿಗೆ ದೈನಂದಿನ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ 100ಕ್ಕಿಂತ ಕೆಳಗಿಳಿದಿದೆ. ಸೋಮವಾರ ದೇಶಾದ್ಯಂತ ದಾಖಲಾದ ಪ್ರಕರಣಗಳ ಸಂಖ್ಯೆ 100ಕ್ಕಿಂತ ಕಡಿಮೆ. ಸತತವಾಗಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವ ಜೊತೆಗೆ ನಾಲ್ಕು ದಿನಗಳಲ್ಲಿ ಯಾವುದೇ ಕೋವಿಡ್ ಸಂಬಂಧಿತ ಸಾವು ಸಂಭವಿಸಿಲ್ಲ. ಸಾವಿನ ಸಂಖ್ಯೆ ಕೂಡಾ ಸತತ ನಾಲ್ಕು ದಿನಗಳಲ್ಲಿ ಶೂನ್ಯ ದಾಖಲಾಗಿರುವುದು 2020ರ ಮಾರ್ಚ್ ಬಳಿಕ ಇದೇ ಮೊದಲು.

ದೇಶದಲ್ಲಿ ಸೋಮವಾರ 83 ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ಭಾನುವಾರ ದಾಖಲಾದ 114ಕ್ಕಿಂತ ಕಡಿಮೆ. ಇದಕ್ಕೂ ಮುನ್ನ 2020ರ ಮಾರ್ಚ್ 27ರಂದು 100ಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಿದ್ದವು. ಆ ಬಳಿಕ ಎಂದೂ ಹೊಸ ಪ್ರಕರಣಗಳು ಎರಡಂಕಿಗೆ ಇಳಿದ ನಿದರ್ಶನ ಇಲ್ಲ. ಚೀನಾದಲ್ಲಿ ಸತತವಾಗಿ ಪ್ರಕರಣಗಳು ಹೆಚ್ಚುತ್ತಿದ್ದು, ಭಾರತದಲ್ಲೂ ಏರಿಕೆಯಾಗುವ ಸಾಧ್ಯತೆ ಇದೆ ಎಂಬ ಭೀತಿಯ ನಡುವೆಯೇ ಪ್ರಕರಣಗಳು ಇಳಿಮುಖವಾಗುತ್ತಿವೆ. ಜನವರಿ 9 ರಿಂದ 15ರ ಅವಧಿಯಲ್ಲಿ ದೇಶದಲ್ಲಿ ಒಟ್ಟು 1062 ಪ್ರಕರಣಗಳು ದಾಖಲಾಗಿದ್ದು, ಇದು 2020ರ ಮಾರ್ಚ್ 23-29ರ ವಾರವನ್ನು ಹೊರತುಪಡಿಸಿದರೆ ಕನಿಷ್ಠ ಸಾಪ್ತಾಹಿಕ ಸಂಖ್ಯೆಯಾಗಿದೆ.

ಕಳೆದ ವಾರ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಕೂಡಾ 2020ರ ಮಾರ್ಚ್ ಬಳಿಕ ಅತ್ಯಂತ ಕನಿಷ್ಠ. ಇಡೀ ವಾರದಲ್ಲಿ ಕೇವಲ ನಾಲ್ಕು ಮಂದಿ ಕೋವಿಡ್ ಸಂಬಂಧಿ ಸಾವು ವರದಿಯಾಗಿದೆ. ಸೋಮವಾರದವರೆಗೆ ಸತತ ನಾಲ್ಕು ದಿನ ದೇಶದಲ್ಲಿ ಯಾವುದೇ ಕೋವಿಡ್ ಸಂಬಂಧಿ ಸಾವು ಸಂಭವಿಸಿಲ್ಲ. 2020ರ ಮಾರ್ಚ್ 25ರ ಬಳಿಕ ಶೂನ್ಯ ಸಾವು ವರದಿಯಾಗಿರುವುದು ಇದೇ ಮೊದಲು.

Similar News