370ನೇ ವಿಧಿ ಪುನಃಸ್ಥಾಪಿಸುವ ವರೆಗೆ ಭಾರತದ ಜತೆ ಮಾತುಕತೆ ಇಲ್ಲ- ಪಾಕಿಸ್ತಾನ

Update: 2023-01-18 04:38 GMT

ಇಸ್ಲಾಮಾಬಾದ್: ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ಸಂವಿಧಾನದ 370ನೇ ವಿಧಿಯ ಪುನಸ್ಥಾಪನೆವರೆಗೆ ಭಾರತದ ಜತೆ ಸಂಧಾನ ಮಾತುಕತೆ ಇಲ್ಲ ಎಂದು ಪಾಕಿಸ್ತಾನ ಪ್ರಧಾನಿ ಶಹಬಾಝ್ ಶರೀಫ್ ಅವರ ಕಚೇರಿ ಮಂಗಳವಾರ ಸ್ಪಷ್ಟಪಡಿಸಿದೆ.

"ಜಮ್ಮು ಕಾಶ್ಮೀರ ಸಮಸ್ಯೆ ಬಗೆಹರಿಸುವ ಸಂಬಂಧ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜತೆ ಗಂಭೀರ ಹಾಗೂ ಪ್ರಾಮಾಣಿಕ ಮಾತುಕತೆಯನ್ನು ಬೇಷರತ್ ಆಗಿ ಪುನಾರಂಭಿಸಲಾಗುತ್ತದೆ" ಎಂಬ ತನ್ನ ನೀತಿಗೆ ಪಾಕ್ ಪ್ರಧಾನಿ ಕಚೇರಿ ತಿದ್ದುಪಡಿ ಮಾಡಿದೆ. "ಜಮ್ಮು ಮತ್ತು ಕಾಶ್ಮೀರ ಬಗ್ಗೆ 2019ರ ಆಗಸ್ಟ್ 15ರಂದು ಕೈಗೊಂಡ ’ಕಾನೂನುಬಾಹಿರ ಕ್ರಮ’ ವನ್ನು ರದ್ದುಪಡಿಸಿದರೆ ಮಾತ್ರ ಭಾರತದ ಜತೆ ಸಂಧಾನ ಮಾತುಕತೆ ಸಾಧ್ಯ" ಎಂದು ಹೇಳಿದೆ.

ಪಾಕಿಸ್ತಾನದ ಪ್ರಧಾನಿ ಅಲ್ ಅರೇಬಿಯಾ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ, ಭಾರತದ ನಾಯಕತ್ವ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡುವ ಸಂದೇಶವೆಂದರೆ, "ಮಾತುಕತೆಗಾಗಿ ಒಟ್ಟಿಗೆ ಕುಳಿತುಕೊಳ್ಳೋಣ" ಎಂದು ಹೇಳಿಕೆ ನೀಡಿದ್ದರು ಎನ್ನಲಾದ ಬೆನ್ನಲ್ಲೇ ಪ್ರಧಾನಿ ಸಚಿವಾಲಯ ಈ ಸ್ಪಷ್ಟನೆ ನೀಡಿದೆ.

ಪ್ರಾಮಾಣಿಕ ಉದ್ದೇಶದಿಂದ ಮಾತುಕತೆಗೆ ಎರಡೂ ದೇಶಗಳನ್ನು ತರುವ ನಿಟ್ಟಿನಲ್ಲಿ ಯುಎಇ ಪ್ರಮುಖ ಪಾತ್ರ ವಹಿಸಬಲ್ಲದು ಎಂದು ಶರೀಫ್ ಹೇಳಿದ್ದರು. ಭಾರತ ನೆರೆಯ ರಾಷ್ಟ್ರವಾಗಿರುವುದರಿಂದ ಅವರ ಜೊತೆಗೆ ಬಾಳ್ವೆ ನಡೆಸುವುದು ಬಿಟ್ಟರೆ ಅನ್ಯ ಮಾರ್ಗ ಇಲ್ಲ ಎಂದು ಶರೀಫ್ ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿಯಾಗಿತ್ತು.

Similar News