"ಜನರನ್ನು ಅನಗತ್ಯವಾಗಿ ಜೈಲಿನಲ್ಲಿರಿಸ ಬೇಕಾದ ಅಗತ್ಯದ ಮೇಲೆ ನಂಬಿಕೆಯಿಲ್ಲ

2020ರ ದಿಲ್ಲಿ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್

Update: 2023-01-18 15:19 GMT

ಹೊಸದಿಲ್ಲಿ, ಜ.18: ಜನರನ್ನು ಅನಗತ್ಯವಾಗಿ ಜೈಲಿನಲ್ಲಿರಿಸಬೇಕಾದ ಅಗತ್ಯದ ಮೇಲೆ ತನಗೆ ನಂಬಿಕೆಯಿಲ್ಲ ಎಂದು ಸುಪ್ರೀಂ ಕೋರ್ಟ್(Supreme court) ಮಂಗಳವಾರ ಹೇಳಿದೆ.

2020ರ ದಿಲ್ಲಿ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯೊಂದನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂ ಕೋರ್ಟ್, ಈ ಮೌಖಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ವಿದ್ಯಾರ್ಥಿ ಹೋರಾಟಗಾರರಾದ ದೇವಾಂಗನಾ ಕಾಲಿಟ(Devangana Kalita), ನಟಾಶಾ ನರ್ವಾಲ್(Natasha Narwal) ಮತ್ತು ಆಸಿಫ್ ಇಕ್ಬಾಲ್ (Asif Iqbal)ತನ್ಹಗೆ ಜಾಮೀನು ನೀಡುವ ದಿಲ್ಲಿ ಹೈಕೋರ್ಟ್ ನ ಆದೇಶವನ್ನು ಪ್ರಶ್ನಿಸಿ ದಿಲ್ಲಿ ಪೊಲೀಸರು ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯನ್ನು ನಡೆಸಿದ ವೇಳೆ ಸುಪ್ರೀಂ ಕೋರ್ಟ್ ತನ್ನ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ದಿಲ್ಲಿಯಲ್ಲಿ 2020ರ ಫೆಬ್ರವರಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿ, ಪೊಲೀಸರು ಈ ಮೂವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಮೊಕದ್ದಮೆ ದಾಖಲಿಸಿದ್ದರು.

ಪೌರತ್ವ ತಿದ್ದುಪಡಿ ಕಾಯ್ದೆಯ ಬೆಂಬಲಿಗರು ಮತ್ತು ಅದನ್ನು ವಿರೋಧಿಸುವವರ ನಡುವೆ 2020 ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ಘರ್ಷಣೆ ಸಂಭವಿಸಿತ್ತು. ಗಲಭೆಯಲ್ಲಿ ಕನಿಷ್ಠ 53 ಮಂದಿ ಮೃತಪಟ್ಟಿದ್ದಾರೆ ಮತ್ತು ನೂರಾರು ಮಂದಿ ಗಾಯಗೊಂಡಿದ್ದಾರೆ. ಗಲಭೆಯಲ್ಲಿ ಮೃತಪಟ್ಟ ಹೆಚ್ಚಿನವರು ಮುಸ್ಲಿಮರು.

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆಗಳು ನಡೆದ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಗಲಭೆ ಸಂಭವಿಸಿತ್ತು. ಈ ಹಿಂಸಾಚಾರಕ್ಕೆ ಪಿತೂರಿ ನಡೆಸಿದವರಲ್ಲಿ ಕಾಲಿಟ, ನರ್ವಾಲ್ ಮತ್ತು ತನ್ಹ ಸೇರಿದ್ದಾರೆ ಎಂದು ದಿಲ್ಲಿ ಪೊಲೀಸರು ಆರೋಪಿಸಿದ್ದರು.

ಮಂಗಳವಾರ, ನ್ಯಾಯಮೂರ್ತಿ ಎಸ್.ಕೆ. ಕೌಲ್ ನೇತೃತ್ವದ ಸುಪ್ರಿಂ ಕೋರ್ಟ್ ಪೀಠವೊಂದು, ಜಾಮೀನು ಅರ್ಜಿಗಳ ಸುದೀರ್ಘ ವಿಚಾರಣೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿತು.

ಹೈಕೋರ್ಟ್ ಗಳು ಜಾಮೀನು ವಿಚಾರಣೆಗಳನ್ನು ಇಷ್ಟೊಂದು ವಿಳಂಬಿಸಬೇಕೇ?

‘‘ಜಾಮೀನು ವಿಷಯಗಳಲ್ಲಿ ಹೈಕೋರ್ಟ್ಗಳು ಇಷ್ಟೊಂದು ಗಂಟೆಗಳನ್ನು ವ್ಯಯಿಸಬೇಕೇ?’’ ಎಂದು ನ್ಯಾ. ಕೌಲ್ ಪ್ರಶ್ನಿಸಿದರು. ‘‘ಇದು ಹೈಕೋರ್ಟ್ನ ನ್ಯಾಯಾಂಗ ಸಮಯದ ಸಂಪೂರ್ಣ ಅಪವ್ಯಯವಾಗಿದೆ. ಜಾಮೀನು ವಿಷಯದಲ್ಲಿ ಪೂರ್ಣ ವಿಚಾರಣೆಯನ್ನು ಉಭಯ ತಂಡಗಳು ಬಯಸಿವೆ. ಹೀಗೆ ಯಾಕೆಂದು ನನಗೆ ಅರ್ಥವಾಗುತ್ತಿಲ್ಲ’’ ಎಂದು ಅವರು ಹೇಳಿದರು.

‘‘ಜಾಮೀನು ಅರ್ಜಿಗಳ ವಿಚಾರಣೆಯನ್ನು ಈ ರೀತಿಯಾಗಿ ಮಾಡಬಾರದು. ಜನರನ್ನು ಅನಗತ್ಯವಾಗಿ ಜೈಲಿನಲ್ಲಿಡಬೇಕಾದ ಅಗತ್ಯದ ಮೇಲೆ ನಮಗೆ ನಂಬಿಕೆಯಿಲ್ಲ’’ ಎಂದು ನ್ಯಾ. ಕೌಲ್ ಹೇಳಿದರು.

ದಿಲ್ಲಿ ಹೈಕೋರ್ಟ್ ಕಾಲಿಟ, ನರ್ವಾಲ್ ಮತ್ತು ತನ್ಹರಿಗೆ 2021 ಜೂನ್ 15ರಂದು ಜಾಮೀನು ನೀಡಿತ್ತು. ಭಿನ್ನಮತವನ್ನು ಹತ್ತಿಕ್ಕುವ ಉದ್ದೇಶದ ಸರಕಾರದ ವರ್ತನೆಗಳನ್ನು ತನ್ನ ಆದೇಶದಲ್ಲಿ ಹೈಕೋರ್ಟ್ ಟೀಕಿಸಿದೆ.

Similar News