ಪ್ರಜಾತಂತ್ರದ ರಾಜಕರಣಿಕರು

Update: 2023-01-18 19:30 GMT

ರಾಜಕಾರಣಿಗಳಿಗಿಂತಲೂ ಅಪಾಯಕಾರಿ ಈ ರಾಜಕರಣಿಕರು. ಆದರೆ ಇವರ ನೈಜ ಶಕ್ತಿಯಿರುವುದು ಇವರ ಸೂತ್ರಧಾರರ ಮೂಲಕ. ಟಿಪ್ಪುಸುಲ್ತಾನನನ್ನು ಟೀಕಿಸಬಯಸುವವರು ಪೂರ್ಣಯ್ಯನನ್ನು ಟೀಕಿಸಬೇಕು. ಚಂದ್ರಗುಪ್ತ ಮೌರ್ಯನಿಗಿಂತಲೂ ಚಾಣಕ್ಯ ಪ್ರಮುಖನಾಗಿದ್ದ. ಕುಣಿವ ಗೊಂಬೆಗಳಿಗಿಂತಲೂ ಕುಣಿಸುವ ಶಕ್ತಿಯುತ ಮಾಂತ್ರಿಕ ಕೈಗಳೇ ಕೇಂದ್ರವಾಗಿರುತ್ತವೆ. ಈ ದೇಶಕ್ಕೂ ಇದೇ ಸ್ಥಿತಿ ಬಾರದಿರಲಿ.

 ಈಚೆಗೆ ಕೇಂದ್ರ ಕಾನೂನು ಸಚಿವರು ಮತ್ತು ಉಪರಾಷ್ಟ್ರಪತಿಗಳು ವೈಯಕ್ತಿಕವಾಗಿಯೋ, ಆಡಳಿತ ಪಕ್ಷದ ಪರವಾಗಿಯೋ, ಅಂತೂ ನ್ಯಾಯಾಂಗವನ್ನು ಕೆಣಕುವ ಕಾರ್ಯವನ್ನು ಮತ್ತೆ ಮತ್ತೆ ಮಾಡುತ್ತಿದ್ದಾರೆ. ಅವರಾಡಿದ್ದು ಸರಕಾರದ ಪರವಾಗಿಯೇ ಎಂದು ತಿಳಿಯಬೇಕು. ಏಕೆಂದರೆ ಅವರ ನಡೆನುಡಿಯನ್ನು ಈ ಸಂಬಂಧ ಮಾತನಾಡಲು ಅನುಕ್ರಮವಾಗಿ ಅಧಿಕಾರವುಳ್ಳ ಪ್ರಧಾನಿಯಾಗಲೀ ರಾಷ್ಟ್ರಪತಿಯಾಗಲೀ ಆಕ್ಷೇಪಿಸಲಿಲ್ಲ. ಪ್ರಧಾನಿಯ ಮೌನ ಇದೊಂದೇ ಅಲ್ಲ; ಕಳೆದ ಎಂಟು ವರ್ಷಗಳ ಆಡಳಿತದಲ್ಲಿ ಯಾವುದರ ಬಗ್ಗೆ ಮಾತನಾಡಬೇಕೋ ಅದರ ಬಗ್ಗೆ ಮಾತನಾಡದೆ, ಯಾವುದು ದೇಶಕ್ಕಾಗಲೀ ಜನರಿಗಾಗಲೀ ಅಗತ್ಯವಿಲ್ಲವೋ ಅದನ್ನಷ್ಟೇ ಮಾತನಾಡುತ್ತ ಕಿಂದರಿಜೋಗಿಯ ಮಾಂತ್ರಿಕತೆಯಲ್ಲಿ ಜನರನ್ನು ನಂಬಿಸಿದ ಶ್ರೇಯಸ್ಸು ಅವರದ್ದು. ಅದರಲ್ಲೂ ವಿವಾದಾತ್ಮಕ ವಿಚಾರಗಳ ಬಗ್ಗೆ ಅವರ ಮೌನವು ಭಗವಂತನಿಗಿಂತಲೂ ನಿಗೂಢ. ಪ್ರಾಯ: ಸನ್ನೆಯನರಿತ ಸತಿಯಂತೆ ಇದನ್ನು ಅರ್ಥಮಾಡಿಕೊಂಡ ಕೆಲವು ಸಚಿವರು, ಸಂಸದರು, ಶಾಸಕರು, ಹಿಂಬಾಲಕರು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅವೆಲ್ಲವೂ ತರ್ಕಹೀನ ದುರಂತಗಳನ್ನು ಸೃಷ್ಟಿಸಿದೆ.

ರಾಷ್ಟ್ರೀಯ ಮಾತ್ರವಲ್ಲ ರಾಜ್ಯ ಮಟ್ಟದ ಅನೇಕ ಆಡಳಿತ ದುರಂಧರರ ಬೇಕಾಬಿಟ್ಟಿ ಅಭಿವ್ಯಕ್ತಿಗಳು ಅಶಾಂತಿಯನ್ನು ಸೃಷ್ಟಿಸುವಲ್ಲಿ ಅಪಾರ ಕೊಡುಗೆಯನ್ನು ನೀಡಿವೆ. ರಾಷ್ಟ್ರಪತಿಗಳು ಆಡಳಿತ ಪಕ್ಷದ ಆಯ್ಕೆಯೇ ಆಗಿದ್ದರೂ ಇಲ್ಲಿಯ ತನಕ ತಮ್ಮ ಘನತೆ, ಗಾಂಭೀರ್ಯಗಳನ್ನು ಉಳಿಸಿಕೊಂಡಂತಿದೆ. ಅವರು ಅನವಶ್ಯಕವಾಗಿ ಇಂತಹ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆಂದು ತಿಳಿಯುವುದೇ ಈ ಸಂದರ್ಭದಲ್ಲಿ ತಪ್ಪು. ಮನುಷ್ಯನಿಗೆ ಕೊನೆಗೂ ಅರ್ಥವಾಗಬೇಕಾದದ್ದು ತಾನು ಶಾಶ್ವತವಲ್ಲ ಎಂಬ ಸತ್ಯ. ಕೊನೆಗೂ ನಾಲ್ಕು ಜನರ ಹೆಗಲೇರುವ ಬದುಕಿನಲ್ಲಿ ಭವಿಷ್ಯಕ್ಕೆ ನೆರವಾಗಬಲ್ಲ ದೊಡ್ಡ-ಸಣ್ಣ ಕೊಡುಗೆಗಳನ್ನು ನೀಡುವಲ್ಲಿ ತನ್ನ ಪಾತ್ರವೇನು ಎಂಬುದನ್ನು ನಿರ್ವಹಿಸಿದರೆ ಬದುಕು ಸಾರ್ಥಕ. ಅದಲ್ಲದೇ ಹೋದರೆ ಭೂಕಂಪನ, ಭೂಕುಸಿತ, ನೆರೆ, ಸುನಾಮಿ, ಅಪಘಾತ, ಸೋಂಕು, ಮಾರಕಾಸ್ತ್ರಗಳು ಮುಂತಾದ ನಿರೀಕ್ಷಿತ ಮತ್ತು ಅನಪೇಕ್ಷಿತ ಆದರೆ ಮಹತ್ವದ ಸಂಗತಿ-ಘಟನೆಗಳ ಸಾಲಿಗೆ ಅನೇಕರ ಬದುಕೂ ಸೇರುತ್ತದೆ. ಇಂತಹ ಸಂಗತಿ ಗಳು ಬಹುಜನರಿಂದ ದೂರವಿವೆ ಎಂಬುದಕ್ಕಾಗಿಯೇ ಅವು ಮಹತ್ವದವು.

ಹೋಗಲಿ, ಈ ವೇದಾಂತ ಸಾಕು ಅನ್ನಿಸಬಹುದು. ಕಾನೂನು ಮತ್ತು ಗೃಹ ಸಚಿವರ ಮೂಲಕ ನಡೆಯುವ ಅನೇಕ ಕಾರುಬಾರುಗಳು ಪ್ರಧಾನಿಯ ನೇರ ಪಾದದಡಿ ನಡೆಯುತ್ತವೆಯೆಂಬುದು ಸರ್ವವಿದಿತ ವಿಚಾರ. ಇವುಗಳಲ್ಲಿ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಧೀಶರುಗಳ ಆಯ್ಕೆಯ ವಿಚಾರವೂ ಇದೆ. ಯಾವುದೋ ಒಂದು ಸರ್ವಮಾನ್ಯವಲ್ಲದಿದ್ದರೂ ಬಹುಮಾನ್ಯ ಸಮ್ಮತಿಯಂತೆ ಈ ಆಯ್ಕೆಯ ಅಧಿಕಾರವು ಸರಕಾರದಲ್ಲೇ ಇದ್ದರೂ ಅದನ್ನು ನಡೆಸುವ ಸೂತ್ರವನ್ನು ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಎಂಬ ಒಂದು ಪ್ರಾಧಿಕಾರಕ್ಕೆ ನೀಡಲಾಯಿತು. ದೇವಸ್ಥಾನಕ್ಕೆ ಅರ್ಚಕರಿರುವಂತೆ, ಧಾರ್ಮಿಕ ಕಾರ್ಯಗಳಿಗೆ ಪುರೋಹಿತರಿರುವಂತೆ (ಅವೆಷ್ಟೇ ಗುಮಾನಿಪೂರ್ಣವಿದ್ದರೂ) ಅನಿವಾರ್ಯವೆಂಬಂತೆ ಈ ಆಯ್ಕೆಗಳು ನಡೆಯುತ್ತವೆ. ಗುಮಾನಿ ಎಂಬ ಪದವನ್ನು ಪ್ರಯೋಗಿಸಿದ ಮೇಲೆ ಅದನ್ನು ಒಪ್ಪಿಕೊಳ್ಳಬೇಕೇ ಎಂಬ ಪ್ರಶ್ನೆ ಉದ್ಭವಿಸಬಹುದು. ಆದರೆ ನಮ್ಮ ಪ್ರಜಾತಂತ್ರವೇ ಗುಮಾನಿಯ ಒರತೆಯಾಗಿರುವಾಗ, ನಮ್ಮ ಚುನಾವಣೆಗಳು ಮೂರ್ಖರನ್ನೂ ಧೂರ್ತರನ್ನೂ ಆರಿಸಿ ಕಳಿಸಲು ಮೀಸಲಾದ ಯಂತ್ರಗಳಂತಿರುವಾಗ, ಅಂಥವರು ಸೃಷ್ಟಿಸಿದ ಕಾನೂನುಗಳನ್ನು ನ್ಯಾಯವೆಂಬಂತೆ ಜನರು, ಸಮಾಜ ಒಪ್ಪಿಕೊಳ್ಳಬೇಕಾಗಿರುವಾಗ, ಒಟ್ಟಿನಲ್ಲಿ ಒಳ್ಳೆಯದು, ಕೆಟ್ಟದ್ದು ಎಂಬುದು ಸಾಪೇಕ್ಷವಾಗಿರುವಾಗ ಈಗಿರುವುದಕ್ಕಿಂತ ಉತ್ತಮ ವ್ಯವಸ್ಥೆಯು ಸೃಷ್ಟಿಯಾಗುವ ವರೆಗೂ ಇದನ್ನು ತಾಳಿಕೊಳ್ಳಲೇಬೇಕು.

ಸಂವಿಧಾನದ ಇತರ ಅಂಗಗಳು ಗಿಲಿಟು ಚಿನ್ನದಂತಿರುವ ವಾತಾವರಣದಲ್ಲಿ ನ್ಯಾಯಾಲಯಗಳು ಮತ್ತು ನ್ಯಾಯಾಂಗವು ಇಪ್ಪತ್ತನಾಲ್ಕು ಕ್ಯಾರೆಟ್ ಚಿನ್ನವಲ್ಲದಿದ್ದರೂ ಇಪ್ಪತ್ತೆರಡು ಕ್ಯಾರೆಟ್ಟಿನಷ್ಟು ಪರಿಶುದ್ಧತೆಯ ಮಾನ್ಯತೆಯನ್ನು ಹೊಂದಿದೆ. ಯಾವುದೇ ರಾಜಕೀಯ ಹಿನ್ನೆಲೆಯನ್ನು ಹೊಂದಿದ್ದರೂ ನ್ಯಾಯಾಧೀಶರಾದ ಬಳಿಕ ಅವರು ಸೀಜರನ ಪತ್ನಿಯಂತೆ ಸಂಶಯಾತೀತ ಶೀಲವನ್ನು ಹೊಂದಿರಬೇಕು ಮಾತ್ರವಲ್ಲ ಬಹುತೇಕ ಮಂದಿ ಹೊಂದಿದ್ದಾರೆಂಬಂತೆ ನಮ್ಮ ನ್ಯಾಯಾಂಗವು ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಉಳಿದಂತೆ ಈ ತನಕವೂ ಕಾರ್ಯನಿರ್ವಹಿಸಿದೆ. ಇಂದಿರಾ ಆಡಳಿತದಲ್ಲಿ ಈ ಬಗೆಯ ಅಪವಾದಗಳು ಆರಂಭಗೊಂಡವು. ಈಚೆಗೂ ಕೆಲವಿವೆ. ಆದರೆ ಅವು ಈ ಚರ್ಚೆಗೆ ಹೊರತಾದವು. ವಿ.ಎಸ್. ಕೃಷ್ಣ ಅಯ್ಯರ್‌ರಂಥವರು ತಮ್ಮ ರಾಜಕೀಯ ಹಿನ್ನೆಲೆ ಮತ್ತು ನಿಲುವುಗಳಿಗೆ ಹೊರತಾಗಿ ಕಾನೂನಿನಡಿ ನ್ಯಾಯವನ್ನು ನಿರ್ವಹಿಸಿದರು. ಹಾಗೆ ನೋಡಿದರೆ ಮತದಾನದ ಹಕ್ಕಿರುವ ಮಾತ್ರವಲ್ಲ ಯಾವುದೇ ಜಾತಿ-ಮತಗಳಲ್ಲಿ ಹುಟ್ಟಿದ ಯಾರೂ ನ್ಯಾಯಾಧೀಶರಾಗಬಾರದು. ರಕ್ತ ನೀರಿಗಿಂತ ದಪ್ಪವಿರುತ್ತದೆಯೆಂಬ ನಂಬುಗೆಯ ಆಧಾರದಲ್ಲಿ ತರ್ಕಿಸಿದರೆ ಅವರವರ ಡಿಎನ್‌ಎ ಅವರವರದ್ದೇ ಇರುತ್ತದಲ್ಲವೇ? ಆದರೂ ವ್ಯಷ್ಟಿಯನ್ನು ಸಮಷ್ಟಿಯಡಿ ತ್ಯಾಗ ಮಾಡುವ ಪ್ರಜ್ಞೆಗೆ ನ್ಯಾಯಾಂಗಕ್ಕಿಂತ ಒಳ್ಳೆಯ ಉದಾಹರಣೆ ಸಿಗಲಾರದು.

ಈಚೆಗೆ ಅಯೋಧ್ಯೆ, ಹಿಜಾಬ್ ಮುಂತಾದ ತೀರ್ಪುಗಳಲ್ಲಿ ಮುಸ್ಲಿಮ್ ನ್ಯಾಯಾಧೀಶರಿದ್ದರೆಂಬುದನ್ನು ನೆನಪಿಸಿಕೊಂಡರೆ ನ್ಯಾಯಾಂಗದ ಉದಾತ್ತತೆ ಅರ್ಥವಾಗಬಹುದು. ಸರ್ವೋಚ್ಚ ನ್ಯಾಯಾಲಯದ ಈ ವ್ಯವಸ್ಥೆಯು ಆರಿಸಿದ ನ್ಯಾಯಾಧೀಶರ ನೇಮಕ, ವರ್ಗಾವಣೆ, ಪದೋನ್ನತಿ ಇವೆಲ್ಲದರಲ್ಲಿ ಶಾಸಕಾಂಗವಾಗಲೀ ಕಾರ್ಯಾಂಗವಾಗಲೀ ತಲೆತೂರಿಸಬಾರದು. ಅವನ್ನು ಅವರ ವಿವೇಚನೆಗೆ ಬಿಡಬೇಕು. ಎಲ್ಲೋ ಒಂದುಕಡೆ ಏನಾದರೂ ತಪ್ಪಾದರೆ ಅದು ವ್ಯವಸ್ಥೆಯ ಸಹಜ ದೋಷವೆಂದು ಪರಿಗಣಿಸಬೇಕೇ ಹೊರತು ಅದಕ್ಕೆ ದುರುದ್ದೇಶವನ್ನು ಆರೋಪಿಸಬಾರದು. ಆದರೆ ನಮ್ಮ ರಾಜಕಾರಣಿಗಳ ಮೂರ್ಖತನವೂ ಧೂರ್ತತನವೂ ತುಂಬಿದ ಅಹಂಕಾರವು ಎಲ್ಲವನ್ನು ತಮ್ಮ ಕಡೆಗೆ ಕೇಂದ್ರೀಕರಿಸಲು ಹವಣಿಸುತ್ತಿದೆ. ಬದಲಾವಣೆಯೇ ಬದಲಾವಣೆಯ ಉದ್ದೇಶವಾಗಬಾರದು. ಇದರಿಂದಾಗಿ ಎಲ್ಲಾ ಆಯ್ಕೆಗಳು ಮಾತ್ರವಲ್ಲ, ವರ್ಗಾವಣೆ, ಪದೋನ್ನತಿ ಮುಂತಾದ ಪ್ರಕ್ರಿಯಾ ನಿರ್ಣಯಗಳು ಸರಕಾರದ ಸಮ್ಮತಿಯನ್ನು ಪಡೆಯುವಲ್ಲಿ ಅನಗತ್ಯ ವಿಳಂಬವಾಗುತ್ತಿದೆ. ಇದು ಕೆಲವರ ಪಾಲಿಗೆ ಶಾಪವಾಗಿ ಪರಿಣಮಿಸಿದ್ದೂ ಇದೆ. ಯಾರಿಗೆ ವರವಾಗಿದೆಯೋ ಗೊತ್ತಿಲ್ಲ.

ಸಂವಿಧಾನವು ಅಧಿಕಾರದ ವಿವಿಧ ಅಂಗಗಳನ್ನು ಪ್ರತ್ಯೇಕಿಸಿ ಸಮನ್ವಯತೆಯನ್ನು ಸಾಧಿಸಿದೆ. ಒಬ್ಬೊಬ್ಬರಿಗೂ ಒಂದೊಂದು ಹೊಣೆಯನ್ನು ಹಂಚಿ ಆ ಮೂಲಕ ಕುಟುಂಬವ್ಯವಸ್ಥೆಯಂತೆ ದೇಶವೂ ನಡೆಯಬಲ್ಲುದು, ಬಾಳಬಲ್ಲುದು ಎಂದು ನಿರೂಪಿಸಿದೆ. ಇವನ್ನು ಅರ್ಥಮಾಡಿಕೊಳ್ಳಬೇಕಾದರೆ ಸಂವಿಧಾನದ ವಿವರವಾದ ಓದು ಬೇಕಾಗಿಲ್ಲ. ಮೇಲ್ನೋಟದ ಓದೇ ಈ ಅಧಿಕಾರ ಮತ್ತು ಕರ್ತವ್ಯಗಳ ವಿಭಜನೆಯನ್ನು ಕಾಣಬಲ್ಲುದು. ಇವುಗಳ ನಡುವೆ ಅಕ್ಷಾಂಶ-ರೇಖಾಂಶಗಳ ಅಮೂರ್ತ ಲಕ್ಷ್ಮಣರೇಖೆಯಿದೆ. ಇದನ್ನು ಅತಿಕ್ರಮಿಸಬಾರದೆಂಬುದು ವಿವೇಚನೆಯ ನಿಲುವು. ಇದನ್ನು ಬಹುತೇಕ ನ್ಯಾಯಾಂಗವು ಅನುಸರಿಸಿದೆ. ಇಲ್ಲವಾದರೆ ಸರಕಾರ ಕೈಗೊಳ್ಳುವ ಅಸಂಖ್ಯ ಜನವಿರೋಧೀ ಕಾನೂನುಗಳು ಇಷ್ಟುಹೊತ್ತಿಗೆ ಕಸದ ಬುಟ್ಟಿಯನ್ನು ಸೇರಬೇಕಾಗಿತ್ತು. ಉದಾಹರಣೆಗೆ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳು ಅನೇಕ ಬಾರಿ ತಮ್ಮ ಮುಂದೆ ಬಂದ ಅರ್ಜಿಗಳನ್ನು ತಳ್ಳಿಹಾಕುವಾಗ ಇವು ಸಂಸತ್ತಿನ/ಶಾಸಕಾಂಗದ ಪರಿಧಿಯೊಳಗಿರುವವು ಮತ್ತು ಈ ಕಾರಣಕ್ಕೆ ನಾವು ಮಧ್ಯೆ ಪ್ರವೇಶಿಸುವುದು ತಪ್ಪಾಗುತ್ತದೆಯೆಂದು ತಮ್ಮ ಹಿಂಜರಿಕೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿವೆ. ಸೂಕ್ಷ್ಮವಾಗಿ ಗಮನಿಸಿದರೆ ಇಂತಹ ಮಾತನ್ನು ಇಂದಿನ ರಾಜಕಾರಣಿಗಳು ಆಡುವುದಿಲ್ಲ. ಅವರು ಜಿರಳೆಗಳಂತೆ ಎಲ್ಲಿ ತಮ್ಮ ಮೀಸೆಯನ್ನು ತೂರಿಸಲು ಸಾಧ್ಯವೋ ಅಲ್ಲಿ ಇದ್ದೇ ಇರುತ್ತಾರೆ. ಏನಿಲ್ಲವೆಂದರೂ ಕೊನೆಗೆ ಪ್ರಚಾರಕ್ಕಾದರೂ ಅಧಿಕಪ್ರಸಂಗತನವನ್ನು ರೂಢಿಸಿಕೊಳ್ಳುತ್ತಾರೆ. ಈ ಬಗ್ಗೆ ವಸ್ತುನಿಷ್ಠರಾಗಿ ನೋಡುವವರಿಗೆ ನ್ಯಾಯಾಂಗದ ಚರ್ಮ ತೆಳುವಾಗಿಯೂ ಇತರ ಅಂಗಗಳ ಚರ್ಮವು ದಪ್ಪವಾಗಿಯೂ ಗೋಚರಿಸದಿರುವುದಿಲ್ಲ.

ಈಗ ಮತ್ತೆ ಕಾನೂನು ಸಚಿವರ ಸಮಸ್ಯೆಯನ್ನು ಗಮನಿಸಿದರೆ ಅವರು ತಮಗಿಷ್ಟವಾದ ನ್ಯಾಯಾಂಗವನ್ನು ಪಡೆಯುವ ಹುನ್ನಾರದಲ್ಲಿದ್ದಾರೆಂಬುದು ಸ್ಪಷ್ಟವಾಗಿದೆ. ಅದನ್ನು ಮಾಡಲು ಅವರಿಗಿರುವ ದಾರಿ ಒಂದೇ: ಯಾವುದೇ ಶಿಫಾರಸನ್ನೂ ಮಂಜೂರು ಮಾಡದೆ ಇಟ್ಟುಕೊಳ್ಳುವುದು. ಮರಳಿಸಿದ ಆಯ್ಕೆಗಳನ್ನು ಸರ್ವೋಚ್ಚ ನ್ಯಾಯಾಲಯವು ಮತ್ತೆ ಹಿಂದಿರುಗಿಸಿದರೆ ಅದನ್ನು ಅಂಗೀಕರಿಸಲೇಬೇಕು. ಆದರೆ ಇದಕ್ಕೆ ಕಾಲಮಿತಿಯಿಲ್ಲದಿರುವುದು ನಮ್ಮ ಸಂವಿಧಾನದ ಲೋಪ-ದೋಷಗಳಲ್ಲ್ಲೊಂದು. ಪ್ರಾಯಃ ಸಂವಿಧಾನ ನಿರ್ಮಾಪಕರು ನಮ್ಮ ರಾಜಕಾರಣಿಗಳ ಮೂರ್ಖ/ಧೂರ್ತತನದ ಆಳ-ಅಗಲವನ್ನು ಅಳೆಯಲು ವಿಫಲರಾದರು; ಒಳ್ಳೆಯದನ್ನಷ್ಟೇ ನಿರೀಕ್ಷಿಸಿದರು. ಈಗ ಆಗುತ್ತಿರುವ ವಿಳಂಬದಿಂದಾಗಿ ಆಯ್ಕೆಯನ್ನು ತಿರಸ್ಕರಿಸಿದವರೂ ಇದ್ದಾರೆ. ಇದರೊಂದಿಗೇ ಕಾನೂನು ಸಚಿವರು ಇನ್ನೊಂದು ಬಾಣವನ್ನೂ ಪ್ರಯೋಗಿಸಿದ್ದಾರೆ: ಕೊಲಿಜಿಯಂನಲ್ಲಿ ಸರಕಾರದ ಪ್ರತಿನಿಧಿಯಿರಬೇಕೆಂಬುದು ಅವರ ಬಯಕೆ. ಸರಕಾರ ನಡೆಸುವವರಿಗೆ ನ್ಯಾಯಾಂಗದ ಸಂಬಳ-ಸಾರಿಗೆಗಳನ್ನು ನಿರ್ಧರಿಸುವ ಹಕ್ಕಿದೆಯಾದರೂ ಅದರಿಂದ ವಂಚಿಸುವ ಹಕ್ಕಿಲ್ಲ.

ಕೊಲಿಜಿಯಂನ್ನು ರದ್ದುಪಡಿಸಿ ಸರಕಾರದ ಹಸ್ತಕ್ಷೇಪಕ್ಕೆ ಹೆಚ್ಚು ಅವಕಾಶವಿರುವ ಕಾನೂನೊಂದನ್ನು ಸರಕಾರವು 2015ರಲ್ಲಿ ಸಂವಿಧಾನದ ತೊಂಭತ್ತೊಂಭತ್ತನೆಯ ತಿದ್ದುಪಡಿಯ ಮೂಲಕ ತಂದಿತ್ತಾದರೂ ಅದನ್ನು ಸರ್ವೋಚ್ಚ ನ್ಯಾಯಾಲಯವು ಈ ಕಾಯ್ದೆಯು ಸಂವಿಧಾನವಿರೋಧಿಯೆಂಬ ಕಾರಣಕ್ಕೆ 2016ರಲ್ಲಿ ಅನೂರ್ಜಿತಗೊಳಿಸಿತು. ಈ ಗಾಯ ಮಾಸಿದೆಯೆಂದು ಮೇಲ್ನೋಟಕ್ಕೆ ಅನ್ನಿಸಿದರೂ ಸರಕಾರವು ಒಳಗೊಳಗೇ ಇದನ್ನು ನಾಲಗೆಯಿಂದ ಕೆದಕುತ್ತಾ ಸೇಡು ತೀರಿಸಿಕೊಳ್ಳುವ ತನ್ನ ತವಕವನ್ನು ಪ್ರದರ್ಶಿಸುತ್ತಿದೆ. ಕಾನೂನು ಸಚಿವರ ಟೀಕೆಗಳು ಅವರ ತಲೆಯೊಳಗಿನ ಶೂನ್ಯದಿಂದ ಬಂದಿವೆಯೆಂದು ಯಾರಾದರೂ ತಿಳಿದರೆ ಅದು ಮೂರ್ಖತನ. ಅವು ಅಧಿಕಾರಮೋಹದಿಂದಾಗಿ ಮತ್ತು ಗುಪ್ತ ಕಾರ್ಯಸೂಚಿಯ ಸಕಾರಣವಾಗಿಯೇ ಪ್ರಕಟವಾಗಿವೆ. ಹಿಂಬಾಗಿಲೇ ಈ ದೇಶದ ಪ್ರವೇಶದ್ವಾರವಾಗಿರುವುದನ್ನು ಈಚೆಗಂತೂ ಎಲ್ಲೆಡೆ ಕಾಣಬಹುದು. ಇಲ್ಲೂ ಇದೇ ಸೂತ್ರ; ಇದೇ ಮಾರ್ಗ.

ಉಪರಾಷ್ಟ್ರಪತಿಗಳ ಹುದ್ದೆ ಗೌರವಪೂರ್ವಕವಾದದ್ದು. ನಿಜಕ್ಕೂ ಇಂತಹದ್ದೊಂದು ಹುದ್ದೆ ದೇಶಕ್ಕೆ ಅಗತ್ಯವಿದೆಯೇ ಎಂಬುದು ವಿವಾದಾಸ್ಪದ. ರಾಷ್ಟ್ರಪತಿಗಳ ಅನುಪಸ್ಥಿತಿಯ ಅಲಂಕಾರವೇ ಉಪರಾಷ್ಟ್ರಪತಿ ಹುದ್ದೆ. ಆದರೂ ಅವರನ್ನು ನಿರುದ್ಯೋಗ ಮತ್ತು ವಿಸ್ಮತಿಯು ಕಾಡದಂತೆ ಅವರನ್ನು ರಾಜ್ಯಸಭೆಯ ಸಭಾಪತಿಯನ್ನಾಗಿ ಮಾಡಲಾಗಿದೆ. ಈ ಹುದ್ದೆಯ ಹಿಂದಿನ ತರ್ಕ ಪಾರಂಪರಿಕ ಸಜ್ಜನಿಕೆಯೇ ಹೊರತು ಇತರ ಸಾಧುತ್ವವನ್ನು ಹೊಂದಿಲ್ಲ. ಇದೇ ಮೌಲ್ಯಮಾಪನವನ್ನು ಅನುಸರಿಸಿದರೆ ರಾಷ್ಟ್ರಪತಿಗಳೂ ಬಹುಪಾಲು ನಿರುದ್ಯೋಗಿಯೇ. ಸರಕಾರ ಕಳುಹಿಸಿದ ಮಸೂದೆಗಳನ್ನು ಸ್ವೀಕರಿಸಿ ಸಹಿಹಾಕುವುದು, ಗೊಂದಲವಿದ್ದರೆ ಸ್ಪಷ್ಟೀಕರಣ ಕೇಳುವುದು, ಅದಕ್ಕುತ್ತರವಾಗಿ ಯಾವುದೇ ಸ್ಪಷ್ಟೀಕರಣ ಬಂದರೂ ಅದನ್ನು ನುಂಗಿಕೊಂಡು ಸ್ವೀಕರಿಸಿ ಸಹಿಹಾಕುವುದು ಅವರ ಕೆಲಸ. ಕೆಲವು ವಿಶೇಷ ಸಂದರ್ಭಗಳಲ್ಲಿ ಸುಗ್ರೀವಾಜ್ಞೆಗೂ ಅವರ ಸಹಿಯ ಹೊಣೆಯಿರುತ್ತದೆ. ಇನ್ನುಳಿದಂತೆ ಸರಕಾರ ತಯಾರಿಸಿದ ಭಾಷಣಗಳನ್ನು ಮಾಡುವುದು ಮತ್ತಿತರ ಆಲಂಕಾರಿಕ ಗೌರವಗಳನ್ನೂ ಅವರು ನಿರ್ವಹಿಸಬೇಕಾಗುತ್ತದೆ. ಯಾಕೆ ರಾಷ್ಟ್ರಪತಿಗಳನ್ನು ಲೋಕಸಭೆ ಅಥವಾ ರಾಜ್ಯಸಭೆಯ ಸಭಾಪತಿಯನ್ನಾಗಿ ಮಾಡಲಿಲ್ಲವೆಂಬ ಪ್ರಶ್ನೆ ಇನ್ನೂ ಹುಟ್ಟದಿರುವುದು ಸೋಜಿಗ. ಅದು ಉದ್ಭವಿಸಿದರೆ ಹೊಸದೊಂದು ವಿನ್ಯಾಸ ಹೊಂದಬಹುದು ಮತ್ತು ಅದು ರಾಜ್ಯಪಾಲರ ಹುದ್ದೆಯ ಸಂದರ್ಭ ದಲ್ಲಿ ರಾಜ್ಯಗಳಿಗೂ ಅನ್ವಯಿಸಬಹುದು. (ವ್ಯತ್ಯಾಸವೆಂದರೆ ಉಪರಾಜ್ಯಪಾಲ ಹುದ್ದೆ ರಾಜ್ಯಗಳಿಗಿನ್ನೂ ನೆನಪಾಗಿಲ್ಲ. ಇದ್ದಿದ್ದರೆ ಒಂದಷ್ಟು ನಿವೃತ್ತ, ತಿರಸ್ಕೃತ ರಾಜಕಾರಣಿಗಳಿಗೆ ಅದು ಪುನರ್ವಸತಿ ಕೇಂದ್ರದಂತೆ ಆಶ್ರಯ ನೀಡಬಹುದು!)

ಈಗಿನ ಉಪರಾಷ್ಟ್ರಪತಿಗಳು ತೀರ ಅಸಂಬದ್ಧವಾಗಿ ಸರ್ವೋಚ್ಚ ನ್ಯಾಯಾಲಯವನ್ನು ಟೀಕಿಸಹೊರಟಿದ್ದಾರೆ. ಸರ್ವೋಚ್ಚ ನ್ಯಾಯಾಲಯವು ಇದಕ್ಕೆ ನೇರವಾಗಿ ಉತ್ತರಿಸಹೊರಟಿಲ್ಲ. ಬದಲಾಗಿ ಭಾರತದ ಅಟಾರ್ನಿ ಜನರಲ್ ಅವರಿಗೆ ಸಾಂವಿಧಾನಿಕ ಹುದ್ದೆಯಲ್ಲಿರುವವರು ಅನಗತ್ಯ ಟೀಕೆಗಳನ್ನು ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಮಾಡದಂತೆ ಉಪದೇಶಿಸಲು ಹೇಳಿತು. ಅದು ಉಪರಾಷ್ಟ್ರಪತಿಗಳನ್ನಾಗಲೀ, ಕಾನೂನು ಸಚಿವರನ್ನಾಗಲೀ ಉಲ್ಲೇಖಿಸಲಿಲ್ಲ. ಆದರೆ ಈ ಬೂದಿ ತಮ್ಮ ಹೆಗಲಿನಲ್ಲಿದೆಯೆಂದು ಒಪ್ಪಿಕೊಂಡವರಂತೆ ಉಪರಾಷ್ಟ್ರಪತಿಗಳು ತಮ್ಮ ಬಗ್ಗೆ ಇತರರು ಉಪದೇಶಿಸಬಾರದೆಂದು ಹೇಳಿದರು. ಇಂತಹ ಸಂದರ್ಭದಲ್ಲಿ ಸಂವಿಧಾನ ಬದ್ಧ ಹುದ್ದೆಯಲ್ಲಿರುವವರು ಪ್ರಜಾತಂತ್ರವನ್ನು ಅವಮಾನಿಸುತ್ತಾರೆಂದು ಸೋನಿಯಾ ಗಾಂಧಿ ತಮ್ಮ ಪಕ್ಷದ ಸಭೆಯಲ್ಲಿ ಹೇಳಿದ್ದನ್ನು ಕೇಳಿಸಿ/ಓದಿ-ಕೊಂಡ ಉಪರಾಷ್ಟ್ರಪತಿಗಳು ಇದನ್ನು ಪ್ರತ್ಯಕ್ಷವಾಗಿ ಮತ್ತು ವಾಚ್ಯವಾಗಿ ಖಂಡಿಸಿದರು.

ಈಗಂತೂ ಅವರು ತಮ್ಮ ಬಿಡುವಿನ ವೇಳೆಯಲ್ಲಿ ನ್ಯಾಯಾಂಗವನ್ನು ಅಪಮಾನಿಸುವ ಟೀಕೆಗಳನ್ನು ಮಾಡುವ ಸಂಕಲ್ಪವನ್ನು ತೊಟ್ಟಂತಿದೆ. ಸಂವಿಧಾನದ ಮೂಲಭೂತ ಹಕ್ಕುಗಳ ಕುರಿತಂತೆ 1972ರಲ್ಲಿ ತೀರ್ಮಾನವಾಗಿ ಐವತ್ತು ವರ್ಷಗಳ ಬಳಿಕವೂ ಮೈಲಿಗಲ್ಲಾಗಿರುವ ಕೇಶವಾನಂದ ಭಾರತಿ ಪ್ರಕರಣದಲ್ಲಿ ಆಗಿರುವ ತೀರ್ಪನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನೆನಪಿಸಿ ಅದು ದುರದೃಷ್ಟಕರವೆಂದು ಬಣ್ಣಿಸಿದ್ದಾರೆ. ಸ್ವತಃ ಹಿರಿಯ ವಕೀಲರಾಗಿರುವ ಉಪರಾಷ್ಟ್ರಪತಿಗಳು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಟೀಕಿಸಲು ಐದು ದಶಕಗಳಷ್ಟು ದೀರ್ಘಾವಧಿಯನ್ನು ತೆಗೆದುಕೊಂಡರೆಂಬುದನ್ನು ಗಮನಿಸಿದರೆ ಬೆಂಕಿಯಿಲ್ಲದೆ ಹೊಗೆಯಿಲ್ಲವೆಂದೇ ತಿಳಿಯಬೇಕಾಗುತ್ತದೆ. ಈ ಟೀಕೆಗಳ ಮೂಲಕ ಅವರು ಸಂವಿಧಾನದ ಕುರಿತು ನ್ಯಾಯಾಂಗ ಮತ್ತು ಸಂಸತ್ತಿನ ಅಧಿಕಾರದ ಕುರಿತು ಹೊಸ ಚರ್ಚೆಯನ್ನು ಆರಂಭಿಸಿದ್ದಾರೆಂದು ಹೇಳುವುದಕ್ಕಿಂತಲೂ ಒಂದು ದೇಶ, ಒಂದು ಪಕ್ಷ, ಒಂದು ನಿಲುವು ಮುಂತಾದ ರಾಜಕೀಯ ಅದ್ವೈತಕ್ಕೆ ಆರಂಭವನ್ನು ಹೇಳಿದ್ದಾರೆಂದು ಅನ್ನಿಸುತ್ತಿದೆ. ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದಾಗ ಅವರು ಹೇಗೆ ಕೇಂದ್ರ ಮೀಸಲುಪಡೆಯಂತೆ ವರ್ತಿಸಿ ಪ್ರಧಾನಿಯವರ ನೀಲಿಗಣ್ಣಿನ ಹುಡುಗನಾಗಿ ಉಪರಾಷ್ಟ್ರಪತಿಯಾದರೆಂಬುದು ಜನಜನಿತ. ಆದ್ದರಿಂದ ಅವರ ಕುರಿತು ಹುಬ್ಬೇರಿಸುವ ಅಗತ್ಯವಿಲ್ಲ.

ರಾಜಕಾರಣಿಗಳಿಗಿಂತಲೂ ಅಪಾಯಕಾರಿ ಈ ರಾಜಕರಣಿಕರು. ಆದರೆ ಇವರ ನೈಜ ಶಕ್ತಿಯಿರುವುದು ಇವರ ಸೂತ್ರಧಾರರ ಮೂಲಕ. ಟಿಪ್ಪು ಸುಲ್ತಾನನನ್ನು ಟೀಕಿಸಬಯಸುವವರು ಪೂರ್ಣಯ್ಯನನ್ನು ಟೀಕಿಸಬೇಕು. ಚಂದ್ರಗುಪ್ತ ಮೌರ್ಯನಿಗಿಂತಲೂ ಚಾಣಕ್ಯ ಪ್ರಮುಖನಾಗಿದ್ದ. ಕುಣಿವ ಗೊಂಬೆಗಳಿಗಿಂತಲೂ ಕುಣಿಸುವ ಶಕ್ತಿಯುತ ಮಾಂತ್ರಿಕ ಕೈಗಳೇ ಕೇಂದ್ರವಾಗಿರುತ್ತವೆ. ಈ ದೇಶಕ್ಕೂ ಇದೇ ಸ್ಥಿತಿ ಬಾರದಿರಲಿ.

Similar News