ಉಡುಪಿ: ಜ.21ರಂದು ಹೈನುಗಾರರ ಒಕ್ಕೂಟದ ವತಿಯಿಂದ ಉಪ್ಪೂರು ಡೈರಿ ಘಟಕದ ಎದುರು ಪ್ರತಿಭಟನೆ

Update: 2023-01-19 14:11 GMT

ಉಡುಪಿ: ಉಡುಪಿ ಜಿಲ್ಲಾ ಹೈನುಗಾರರ ಪರಿವಾರ ಒಕ್ಕೂಟ, ಜಿಲ್ಲೆಯ ಹೈನುಗಾರರ, ಸಿಬ್ಬಂದಿಗಳ ಸ್ಥಿತಿಗತಿಗಳನ್ನು ಸಂಬಂಧಪಟ್ಟವರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಇದೇ ಜ.21ರ ಶನಿವಾರ ಬೆಳಗ್ಗೆ 10:00ಗಂಟೆಯಿಂದ ಉಪ್ಪೂರಿನಲ್ಲಿರುವ ಡೈರಿ ಘಟಕದ ಎದುರು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ಒಕ್ಕೂಟದ ಶೇಡಿಕೊಡ್ಲು ವಿಠಲ ಶೆಟ್ಟಿ ಹಾಗೂ ಸಬ್ಲಾಡಿ ಮಂಜಯ್ಯ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಸ್ವಾವಲಂಬಿ ಒಕ್ಕೂಟವಾಗಿದ್ದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು, ಇದೀಗ ಉಭಯ ಜಿಲ್ಲೆಗಳ ಹಾಲಿನ ಬಳಕೆಗಾಗಿ ಅನ್ಯ ಹಾಲು ಒಕ್ಕೂಟವನ್ನು ಆಶ್ರಯಿಸಬೇಕಾದ ಅನಿವಾರ್ಯ ಪರಿಸ್ಥಿತಿಗೆ ಬಂದು ತಲುಪಿದೆ ಎಂದರು.

ಕಳೆದ ಕೆಲವು ತಿಂಗಳುಗಳಿಂದ ಒಕ್ಕೂಟದ ವ್ಯಾಪ್ತಿಯ ಸದಸ್ಯ ಸಂಘಗಳ ಹಾಲಿನ ಉತ್ಪಾದನೆಯಲ್ಲಿ ಶೇ.25ಕ್ಕಿಂತಲೂ ಅಧಿಕ ಇಳಿಮುಖವಾಗಿರುವುದು ಕಂಡುಬಂದಿದೆ. ದುಬಾರಿಯಾದ ಪಶು ಆಹಾರ, ದನಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿರುವ ಚರ್ಮ ಗಂಟು ಅಂಟು ರೋಗಗಳು ಹೈನುಗಾರರನ್ನು ಹೈನುಗಾರಿಕೆಯಿಂದ ವಿಮುಖವಾಗಿರುಸುತ್ತಿವೆ ಎಂದವರು ವಿವರಿಸಿದರು.

ಕಳೆದ ಸುಮಾರು ಒಂದು ವರ್ಷದಿಂದ ಒಕ್ಕೂಟದ ವ್ಯಾಪ್ತಿಯಲ್ಲಿ ಸುಮಾರು 4,500 ದಿಂದ 5000 ಮಂದಿ ಹೈನುಗಾರಿಕೆಯನ್ನು ಸಂಪೂರ್ಣ ವಾಗಿ ತೊರೆದಿರುವುದು ದೊಡ್ಡ ಸಮಸ್ಯೆಯಾಗಿದೆ ಪರಿಣಮಿಸಿದೆ. ಇದೇ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸುಮಾರು ಎರಡು ಸಾವಿರದಿಂದ ಮೂರು ಸಾವಿರ ಮಂದಿ ಹೈನುಗಾರಿಕೆ ತೊರೆದಿದ್ದಾರೆ ಎಂದು ವಿಠಲ ಶೆಟ್ಟಿ ಕಳವಳ ವ್ಯಕ್ತಪಡಿಸಿದರು.

ಇವುಗಳೊಂದಿಗೆ ಸದಸ್ಯ ಸಂಘಗಳಲ್ಲಿ ದುಡಿಯುತ್ತಿರುವ ಸಾವಿರಾರು ಮಂದಿ ಸಿಬ್ಬಂದಿ ಹಾಗೂ ಅವರ ಕುಟುಂಬದ ಜೀವನ ಶೋಚನೀಯವಾಗಿದೆ.  ಈ ಬಗ್ಗೆಯೂ ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಗಮನ ಸೆಳೆಯಲು ಜ.21ರಂದು ಒಕ್ಕೂಟದ ಉಪ್ಪೂರು ಡೈರಿ ಘಟಕದ ಎದುರು   ಹೈನುಗಾರರು ಹಾಗೂ ಸಂಘಗಳ ಸಿಬ್ಬಂದಿಗಳು ಸೇರಿ ಸುಮಾರು ಮೂರು ಸಾವಿರ ಮಂದಿ ಒಟ್ಟು ಸೇರಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಸಬ್ಲಾಡಿ ಮಂಜಯ್ಯ ಶೆಟ್ಟಿ ತಿಳಿಸಿದರು.

ಪ್ರಮುಖ ಬೇಡಿಕೆಗಳು: ಹೈನುಗಾರರ ಚಿಂತಾಜನಕ ಪರಿಸ್ಥಿತಿಯಲ್ಲೂ ಒಕ್ಕೂಟ ರೈತರಿಗೆ ನೀಡಿದ ಪ್ರೋತ್ಸಾಹದರವನ್ನು ಹಿಂದಕ್ಕೆ ಪಡೆದಿದ್ದು, ಇದನ್ನು ಮರಳಿ ರೈತರಿಗೆ ನೀಡಬೇಕು.

►ಅನ್ಯ ಒಕ್ಕೂಟದಿಂದ ತರಿಸುವ ಹಾಲಿಗೆ ಲೀಟರೊಂದಕ್ಕೆ 6ರಿಂದ 7ರೂ. ಹೆಚ್ಚುವರಿಉ ಖರ್ಚು ಬರುತಿದ್ದು, ಅದೇ ಮೊತ್ತವನ್ನು ನಮ್ಮ ಹೈನುಗಾರರಿಗೆ  ಹೆಚ್ಚುವರಿಯಾಗಿ ನೀಡಿದರೆ ನಾವು ಹಾಲು ಉತ್ಪಾದನೆಯಲ್ಲಿ ಸ್ವಾವಲಂಬಿ ಯಾಗುವುದರ ಜೊತೆಗೆ ರೈತರ ಜೀವನ ಮಟ್ಟವೂ ಸುಧಾರಿಸಲು ಸಾಧ್ಯವಾಗುತ್ತದೆ.

►ಒಕ್ಕೂಟವು ಸದಸ್ಯ ಸಂಘಗಳಿಗೆ ನೀಡುತ್ತಿರುವ ಹಾಲಿನ ದರ ವ್ಯತ್ಯಾಸ ತೀರಾ ಕಡಿಮೆ ಇದ್ದು, ಅದನ್ನು ಹೆಚ್ಚಿಸಿದಲ್ಲಿ ಸಂಘದ ಕಾರ್ಯಾಚರಣೆಗೆ ಅನುಕೂಲವಾಗಲಿದೆ. ಸಂಘದ ಸಿಬ್ಬಂದಿಗಳಿಗೆ ನ್ಯಾಯಯುತವಾದ ವೇತನವನ್ನು ನೀಡಲು ಅವಕಾಶವಾಗಿ ಅವರ ಜೀವನ ಮಟ್ಟ ಸುಧಾರಿಸಲಿದೆ.

►ನಂದಿನಿ ಪಶುಆಹಾರ ದರವನ್ನು ನಿಯಂತ್ರಿಸಿ ಗುಣಮಟ್ಟದ ಪಶು ಆಹಾರ ನಿರಂತರವಾಗಿ ಹೈನುಗಾರರಿಗೆ ಲಭಿಸುವಂತೆ ಮಾಡಬೇಕು.

ಯಶಸ್ವಿನಿ ಯೋಜನೆಯನ್ನು ಮಣಿಪಾಲದ ಕೆಎಂಸಿಯಂಥ ಆಸ್ಪತ್ರೆಗಳಿಗೂ ವಿಸ್ತರಿಸಬೇಕು. ಉಭಯ ಜಿಲ್ಲೆಗಳಲ್ಲಿ ಚರ್ಮಗಂಟು ರೋಗ ಉಲ್ಬಣಿಸಿದ್ದು, ಅದನ್ನು ಹತೋಟಿಗೆ ತರಲು ತುರ್ತಾಗಿ ಕಾರ್ಯಯೋಜನೆ ರೂಪಿಸಿಕೊಳ್ಳಬೇಕು. ದನಗಳಿಗೆ ಚಿಕಿತ್ಸೆ ಹಾಗೂ ಲಸಿಕೆ ನೀಡಲು ಆದ್ಯತೆ ದೊರೆಯಬೇಕು ಎಂದು ಒಕ್ಕೂಟದ ಮಾಜಿ ಅಧ್ಯಕ್ಷರೂ ಆಗಿರುವ ಶೇಡಿಕೊಡ್ಲು ವಿಠಲ ಶೆಟ್ಟಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಮಾಜಿ ನಿರ್ದೇಶಕ ಮಂಜಯ್ಯ ಶೆಟ್ಟಿ ಅಲ್ಲದೇ, ಮಾಜಿ ಅಧ್ಯಕ್ಷ ಜಗದೀಶ್ ಕಾರಂತ ಕೋಟ, ಮಾಜಿ ನಿರ್ದೇಶಕ ಚೇರ್ಕಾಡಿ ಅಶೋಕಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Similar News