ಮುಂಬಯಿಗರ ಕನಸುಗಳನ್ನು ನನಸಾಗಿಸಲು ಶಿಂದೆ-ಫಡ್ನವೀಸ್ ಜೋಡಿ ನೆರವಾಗಲಿದೆ:‌ ಮೋದಿ

Update: 2023-01-19 16:15 GMT

ಮುಂಬೈ,ಜ.19: ಮುಂಬೈ ಅಭಿವೃದ್ಧಿಗೆ ಹಣಕಾಸಿನ ಕೊರತೆಯಿಲ್ಲ ಮತ್ತು ಮುಂಬಯಿಗರ ಕನಸುಗಳನ್ನು ನನಸಾಗಿಸಲು ಮುಖ್ಯಮಂತ್ರಿ ಏಕನಾಥ ಶಿಂದೆ (
Eknath Shinde)ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್(Devendra Fadnavis) ಅವರ ಜೋಡಿಯು ನೆರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಗುರುವಾರ ಇಲ್ಲಿ ಹೇಳಿದರು.

‘ಮುಂಬೈ ಪರಿವರ್ತನೆಗೆ ಸ್ಥಳೀಯ ಆಡಳಿತವು ಬದ್ಧವಾಗಿದೆ. ಹಣಕಾಸನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು ಮತ್ತು ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಅಗತ್ಯವಾಗಿದೆ. ಮುಂಬೈನ ಅಭಿವೃದ್ಧಿಗಾಗಿ ನಾವೆಲ್ಲರೂ ಕೈಜೋಡಿಸೋಣ ’ಎಂದರು.

ವಿಶ್ವವು ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವಾಗ ಭಾರತವು ಸಬ್ಸಿಡಿಗಳನ್ನು ಒದಗಿಸುತ್ತಿದೆ ಎಂದ ಅವರು,ಕಡುಬಡವರಿಗೂ ಉತ್ತಮ ಸೌಲಭ್ಯಗಳನ್ನು ಒದಗಿಸಲು ಡಬಲ್ ಇಂಜಿನ್ ಸರಕಾರವು ಬದ್ಧವಾಗಿದೆ. ಆದ್ದರಿಂದ ರೈಲ್ವೆ ನಿಲ್ದಾಣಗಳನ್ನು ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಅತ್ಯಂತ ಹಳೆಯ ರೈಲುನಿಲ್ದಾಣಗಳಲ್ಲಿ ಒಂದಾಗಿರುವ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ (ಸಿಎಸ್ಎಂಟಿ) ಅನ್ನು ಪುನರ್ ಅಭಿವೃದ್ಧಿಗೊಳಿಸಲಾಗುತ್ತಿದೆ. ನಾವು ಬಹು ಮಾದರಿಯ ಸಂಪರ್ಕಕ್ಕೆ ಒತ್ತು ನೀಡುತ್ತಿದ್ದೇವೆ ಎಂದರು.

ಮುಂಬೈಗೆ ಒಂದು ದಿನದ ಭೇಟಿ ನೀಡಿದ ಸಂದರ್ಭ ಮೋದಿ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನ ಎಂಎಂಆರ್ಡಿಎ ಮೈದಾನದಲ್ಲಿ ಎರಡು ನೂತನ ಮುಂಬೈ ಮೆಟ್ರೋ ಮಾರ್ಗಗಳು ಹಾಗೂ ರಸ್ತೆ ಕಾಂಕ್ರೀಟೀಕರಣ,ಒಳಚರಂಡಿ ಸಂಸ್ಕರಣೆ ಸ್ಥಾವರಗಳು ಮತ್ತು ಪಿಎಂ ಸ್ವನಿಧಿ ಸೇರಿದಂತೆ 38,000 ಕೋ.ರೂ.ಗೂ ಅಧಿಕ ವೆಚ್ಚದ ಹಲವಾರು ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸಗಳನ್ನು ನೆರವೇರಿಸಿ ಮಾತನಾಡುತ್ತಿದ್ದರು.

ಧಾರಾವಿ ಪುನರ್ಅಭಿವೃದ್ಧಿಯು ರಾಜ್ಯ ಸರಕಾರದ ಬದ್ಧತೆಯಾಗಿದೆ ಎಂದು ಒತ್ತಿ ಹೇಳಿದ ಅವರು,ಮುಂದಿನ ದಿನಗಳಲ್ಲಿ ಮುಂಬೈ ಹೊಸ ರೂಪವನ್ನು ತಳೆಯಲಿದೆ. ವಾಯುಮಾಲಿನ್ಯಕ್ಕೆ ಕಡಿವಾಣ ಹಾಕಲು ವಿದ್ಯುತ್ಚಾಲಿತ ವಾಹನಗಳಿಗೆ ಒತ್ತು ನೀಡಲಾಗುವುದು. ಜಲ ಸಂಸ್ಕರಣೆ ಸ್ಥಾವರಗಳ ಮೂಲಕ ಬೃಹತ್ ಪ್ರಮಾಣದಲ್ಲಿ ನದಿಗಳ ಶುದ್ಧೀಕರಣ ನಡೆಸಲಾಗುತ್ತಿದೆ ಎಂದರು. 2014ರಲ್ಲಿ ಮುಂಬೈ ಮೆಟ್ರೋ ಕೇವಲ 11 ಕಿ.ಮೀ.ದೂರದ ಮಾರ್ಗದಲ್ಲಿ ಸಂಚರಿಸುತ್ತಿತ್ತು,ಆದರೆ ಶಿಂದೆ ಮತ್ತು ಫಡ್ನವೀಸ್ ತಂಡವು ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡಿದೆ ಎಂದು ಪ್ರಧಾನಿ ಹೇಳಿದರು.

ಇಂದು ಚಾಲನೆ ನೀಡಲಾದ ಯೋಜನೆಗಳನ್ನು ಪ್ರಶಂಸಿಸಿದ ಮೋದಿ,ಇದೇ ಮೊದಲ ಬಾರಿಗೆ ಇಡೀ ವಿಶ್ವವು ಭಾರತವನ್ನು ಗಮನಿಸುತ್ತಿದೆ. ವಿಶ್ವಾದ್ಯಂತ ಭಾರತದ ಬಗ್ಗೆ ಸಾಕಷ್ಟು ಸಕಾರಾತ್ಮಕತೆಯಿದೆ. ತನ್ನ ದೂರದೃಷ್ಟಿಯ ಮತ್ತು ಆಧುನಿಕ ನಿಲುವುಗಳೊಂದಿಗೆ ಭಾರತವು ಮುನ್ನಡೆಯುತ್ತಿದೆ. ಇಂದು ನಾವು ಉತ್ತಮ ಸಂಪರ್ಕ ಮತ್ತು ಆರ್ಥಿಕ ಸಮದ್ಧಿಗಾಗಿ ಆಧುನಿಕ ಮೂಲಸೌಕರ್ಯಗಳನ್ನು ಒದಗಿಸುತ್ತಿದ್ದೇವೆ ಎಂದು ಹೇಳಿದರು.

ಅಂಧೇರಿಯ ಗುಂಡಾವಳಿ ಮೆಟ್ರೋ ನಿಲ್ದಾಣದಲ್ಲಿ ಮುಂಬೈ ಮೆಟ್ರೋ 2ಎ ಮತ್ತು 7 ಮಾರ್ಗಗಳನ್ನು ಉದ್ಘಾಟಿಸಿದ ಮೋದಿ ಅಲ್ಲಿಂದ ಮೋಗ್ರಾವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿ ಗುಂಡಾವಳಿಗೆ ಮರಳಿದರು.

Similar News