ಕೇರಳ: ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯರಿಗೆ ಇನ್ನು ಮುಂದೆ ಋತುಚಕ್ರ ಹಾಗೂ ಹೆರಿಗೆ ರಜೆ

Update: 2023-01-20 09:19 GMT

ತಿರುವನಂತಪುರಂ: ಎಲ್ಲ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಋತುಚಕ್ರ ರಜೆಯನ್ನು ಘೋಷಿಸಿರುವ ಕೇರಳ ಸರ್ಕಾರ, 18 ವರ್ಷಕ್ಕೆ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ 60 ದಿನಗಳ ಕಾಲ ಹೆರಿಗೆ ರಜೆ ನೀಡಬೇಕು ಎಂದೂ ಪ್ರಾಧಿಕಾರಗಳಿಗೆ ಸೂಚಿಸಿದೆ.

ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರವು, ವಿದ್ಯಾರ್ಥಿನಿಯರು ತಮ್ಮ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಲು ನಿಗದಿಗೊಳಿಸಲಾಗಿರುವ ಕನಿಷ್ಠ ಹಾಜರಾತಿ ಮಿತಿಯನ್ನು ಈಗಿರುವ ಶೇ. 75 ಮಿತಿಯಿಂದ ಶೇ. 73 ಮಿತಿಗಿಳಿಸುವಂತೆಯೂ ಎಲ್ಲ ವಿಶ್ವವಿದ್ಯಾಲಯಗಳಿಗೆ ಸೂಚಿಸಿದೆ.

ಕೊಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯವು ತನ್ನ ವಿದ್ಯಾರ್ಥಿನಿಯರಿಗೆ ಋತುಚಕ್ರ ರಜೆ ನೀಡಲು ನಿರ್ಧರಿಸಿದ ಬೆನ್ನಿಗೇ ಹೇಳಿಕೆ ನೀಡಿದ್ದ ಉನ್ನತ ಶಿಕ್ಷಣ ಸಚಿವೆ ಆರ್. ಬಿಂದು, ಈ ಸೌಲಭ್ಯವನ್ನು ಎಲ್ಲ ವಿಶ್ವವಿದ್ಯಾಲಯಗಳಿಗೂ ವಿಸ್ತರಿಸಬೇಕು ಎಂಬ ಆಗ್ರಹದ ಕುರಿತು ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದ್ದರು.

ಋತುಚಕ್ರ ರಜೆ ನೀಡುವ ನಿರ್ಧಾರವು ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ನಿರ್ಧಾರವನ್ನು ಆಧರಿಸಿದೆ. ಇದಕ್ಕೂ ಮುನ್ನ ಡಿಸೆಂಬರ್‌ನಲ್ಲಿ ಎಂ.ಜಿ. ವಿಶ್ವವಿದ್ಯಾಲಯವು ಪದವಿ ವಿದ್ಯಾರ್ಥಿನಿಯರಿಗೆ ಹೆರಿಗೆ ರಜೆ ನೀಡಲು ನಿರ್ಧರಿಸಿತ್ತು ಎಂದು ಆರ್. ಬಿಂದು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮತ್ತೊಂದು ಬಾರಿ ಇಡೀ ದೇಶಕ್ಕೆ ಕೇರಳ ಮಾದರಿಯಾಗಿ ಹೊರಹೊಮ್ಮಿದೆ. ಲಿಂಗಭೇದ ರಹಿತ ಸಮಾಜ ನಿರ್ಮಾಣಕ್ಕೆ ಎಡರಂಗ ಸರ್ಕಾರ ಬದ್ಧವಾಗಿದ್ದು, ಉನ್ನತ ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಮುಟ್ಟು ಹಾಗೂ ಹೆರಿಗೆ ರಜೆಯನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.

Similar News