ಜಾನ್‌ ಸತ್ಯನ್‌ ಅವರನ್ನು ಮದ್ರಾಸ್‌ ಹೈಕೋರ್ಟ್‌ ನ್ಯಾಯಾಧೀಶ ಹುದ್ದೆಗೆ ತನ್ನ ಶಿಫಾರಸನ್ನು ಪುನರುಚ್ಛರಿಸಿದ ಕೊಲೀಜಿಯಂ

ಪ್ರಧಾನಿಯನ್ನು ಟೀಕಿಸುವ ಲೇಖನ ಶೇರ್‌ ಮಾಡಿರುವುದರಿಂದ ಅವರ ಅರ್ಹತೆ ಕಡಿಮೆಯಾಗದು ಎಂದ ಕೊಲೀಜಿಯಂ

Update: 2023-01-20 09:03 GMT

ಹೊಸದಿಲ್ಲಿ: ಮದ್ರಾಸ್‌ ಹೈಕೋರ್ಟ್‌ ನ್ಯಾಯಾಧೀಶರಾಗಿ ಪದೋನ್ನತಿಗೆ ವಕೀಲ ಆರ್‌ ಜಾನ್‌ ಸತ್ಯನ್‌ ಅವರ ಹೆಸರನ್ನು ಶಿಫಾರಸನ್ನು ಮಾಡಿರುವ ತನ್ನ ಕ್ರಮವನ್ನು ಸುಪ್ರೀಂ ಕೋರ್ಟ್‌ (Supreme Court) ಕೊಲೀಜಿಯಂ ಪುನರುಚ್ಛರಿಸಿದೆಯಲ್ಲದೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಟೀಕಿಸಿ ಬರೆಯಲಾದ ಲೇಖನವೊಂದನ್ನು ಶೇರ್‌ ಮಾಡಿರುವುದು ನ್ಯಾಯಾಧೀಶರ ಹುದ್ದೆಗೆ ಅವರ ಅರ್ಹತೆಯನ್ನು ಕಡಿಮೆಗೊಳಿಸುವುದಿಲ್ಲ ಎಂದು ಹೇಳಿದೆ. ಸತ್ಯನ್‌ ಅವರು ಶೇರ್‌ ಮಾಡಿದ್ದ ಆನ್‌ಲೈನ್‌ ಲೇಖನದ ವಿಚಾರವನ್ನು ಮುಂದಿಟ್ಟುಕೊಂಡು ಅವರ ಪದೋನ್ನತಿ ಶಿಫಾರಸನ್ನು ಕೇಂದ್ರ ವಾಪಸ್‌ ಕಳುಹಿಸಿತ್ತು.

ಸತ್ಯನ್‌ ಅವರು ನ್ಯಾಯಾಧೀಶ ಹುದ್ದೆಗೆ ಅರ್ಹ ವ್ಯಕ್ತಿ ಎಂದು ಪರಿಗಣಿಸಲಾಗಿತ್ತು ಎಂದು ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಎಸ್‌ ಕೆ ಪೌಲ್‌ ಮತ್ತು ಕೆ. ಎಂ. ಜೋಸೆಫ್‌ ಅವರನ್ನೊಳಗೊಂಡ ಕೊಲೀಜಿಯಂ ಹೇಳಿದೆ.

ಅವರ ಪದೋನ್ನತಿಗೆ ಫೆಬ್ರವರಿಯಲ್ಲಿ ಶಿಫಾರಸು ಮಾಡಲಾಗಿತ್ತು. "ಅವರು thequintನಲ್ಲಿ ಬಂದ ಲೇಖನವನ್ನು ಶೇರ್‌ ಮಾಡಿರುವುದು ಹಾಗೂ 2017 ರಲ್ಲಿ ವೈದ್ಯಕೀಯ ಶಿಕ್ಷಣ ಆಕಾಂಕ್ಷಿ ವಿದ್ಯಾರ್ಥಿನಿಯೊಬ್ಬಳ ಆತ್ಮಹತ್ಯೆ ಕುರಿತ ಅವರ ಪೋಸ್ಟ್‌  ಸತ್ಯನ್‌ ಅವರ ಅರ್ಹತೆ, ವ್ಯಕ್ತಿತ್ವ ಹಾಗೂ ಪ್ರಾಮಾಣಿಕತೆ ಮೇಲೆ ಯಾವುದೇ ಪರಿಣಾಮ ಬೀರದು. ಅವರು ಮದ್ರಾಸ್‌ ಹೈಕೋರ್ಟ್‌  ನ್ಯಾಯಾಧೀಶರ ಹುದ್ದೆಗೆ ನೇಮಕಾತಿಗಾಗಿ ಅರ್ಹರೆಂದು ಕೊಲೀಜಿಯಂ ಪರಿಗಣಿಸುತ್ತದೆ," ಎಂದು ಕೊಲೀಜಿಯಂ ಹೇಳಿದೆ.

ಮದ್ರಾಸ್‌ ಹೈಕೋರ್ಟ್‌ ನ್ಯಾಯಾಧೀಶ ಹುದ್ದೆಗೆ ನೇಮಕಾತಿಗಾಗಿ ಗುರುವಾರ ಶಿಫಾರಸು ಮಾಡಲಾದ ಕೆಲ ಬೇರೆ ಹೆಸರುಗಳಿಗಿಂತ ಸತ್ಯನ್‌ ಅವರ ಹೆಸರಿನ ಶಿಫಾರಸಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ಅಭಿಪ್ರಾಯವನ್ನು ಕೊಲೀಜಿಯಂ ವ್ಯಕ್ತಪಡಿಸಿದೆ.

ಇದನ್ನೂ ಓದಿ: ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದ ಬಿಜೆಪಿ ಸಂಸದ  ಬ್ರಿಜ್ ಭೂಷಣ್ ಸಿಂಗ್

Similar News