ಭಟ್ಕಳ | ಹೆದ್ದಾರಿ ಕಾಮಗಾರಿ ನೆಪದಲ್ಲಿ ಖಾಸಗಿ ಜಾಗದಲ್ಲಿದ್ದ ಕಬ್ಬಿಣದ ಸರಳು ಕಳವು: ದೂರು

Update: 2023-01-20 10:34 GMT

ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥ ಕಾಮಾಗಾರಿ ಮಾಡುತ್ತಿರುವ ಜೆಸಿಬಿ ಯಂತ್ರದ ಚಾಲಕ ಖಾಸಗಿ ಜಾಗದಲ್ಲಿ ಹಾಕಲಾಗಿದ್ದ ಲಿಂಟಲ್ (ಹಾಸುಗಲ್ಲು) ಒಡೆದು ಅದರಲ್ಲಿದ್ದ ಕಬ್ಬಿಣದ ಸರಳುಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿ ಭಟ್ಕಳ ಗುಡ್ಲಕ್ ರಸ್ತೆಯ ನಿವಾಸಿ ಮೊಹಮ್ಮದ್ ಜುಬೇರ್ ಇಕ್ಕೇರಿ ಎಂಬವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ತಮ್ಮ ಖಾಸಗಿ ಜಾಗದಲ್ಲಿ ಅಂಗಡಿ ಇದ್ದು, ಭಾರೀ ವಾಹನಗಳ ಓಡಾಟಕ್ಕೆ ಅನುಕೂಲವಾಗುವಂತೆ ಅಂಗಡಿಯ ಮುಂದೆ ಉತ್ತಮ ಗುಣಮಟ್ಟದಿಂದ ಹಾಸುಗಲ್ಲು ಹಾಕಿ ರಸ್ತೆ ನಿರ್ಮಿಸಿದ್ದು, ಹೆದ್ದಾರಿ ಕಾಮಾಗಾರಿ ನೆಪದಲ್ಲಿ ಹಾಸುಗಲ್ಲು ಒಡೆದು ಅದರಲ್ಲಿನ ಕಬ್ಬಿಣದ ಸರಳುಗಳನ್ನು ಜೆಸಿಬಿ ಚಾಲಕ ಹಾಗೂ ಮೇಲ್ವಿಚಾರಕ ಕದ್ದಿದ್ದಾರೆ ಎಂದು ದೂರಿನಲ್ಲಿ ಜುಬೇರ್ ತಿಳಿಸಿದ್ದಾರೆ.

ಹಾಸುಗಲ್ಲಿನಲ್ಲಿ ಭಾರವಾದ ಕಬ್ಬಿಣದ ಸರಳುಗಳನ್ನು ಬಳಸಲಾಗಿದೆ. ಹತ್ತಿರದ IRB ಕಂಪನಿಯ ಜನರು ಹೆದ್ದಾರಿಯಲ್ಲಿ ಕೆಲಸ ಮಾಡುತ್ತಿದ್ದರು. ಏಕಾಏಕಿ ಜೆಸಿಬಿ (ಕೆಎ 47-ಎಂ3951) ಚಾಲಕ ತನ್ನ ವಾಹನವನ್ನು ಅನವಶ್ಯಕವಾಗಿ ಅವರ ಜಾಗಕ್ಕೆ ತಂದು ಲಿಂಟಲ್ ಒಡೆದು ಅದರೊಳಗಿದ್ದ ಕಂಬಿಗಳನ್ನು ಎತ್ತಿ ಮೇಲ್ವಿಚಾರಕನ ಸಹಾಯದಿಂದ ಜೆಸಿಬಿಯಲ್ಲಿ ಹಾಕಿದ್ದಾನೆ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ರೀತಿ ಅವ್ಯಾಹತವಾಗಿ ಲಿಂಟಲ್ ಮುರಿದು ಕಂಬಿಗಳನ್ನು ಕಳ್ಳತನ ಮಾಡುತ್ತಿರುವ ಬಗ್ಗೆ ಸ್ಥಳೀಯರು ಚಾಲಕನನ್ನು ಪ್ರಶ್ನಿಸಿದಾಗ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆದರೆ ಮೇಲ್ವಿಚಾರಕರ ನೆರವಿನಿಂದ ಕಬ್ಬಿಣದ ಸರಳುಗಳನ್ನು ಜೆಸಿಬಿಗೆ ಹಾಕಿ ಅದನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕೂಡಲೇ ಕಳ್ಳತನದ ಪ್ರಕರಣ ದಾಖಲಿಸಿಕೊಂಡು ಚಾಲಕನ ಮೇಲೆ ಅಗತ್ಯ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿದಾರರು ಆಗ್ರಹಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಎರಡು ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಮತ್ತು ಪಂಚಾಯತ್ ಸದಸ್ಯ ಮಿಸ್ಬಾ-ಉಲ್-ಹಕ್ ಶಿಫಾ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಬಂಧಿಸಿದ ಮೇಲ್ವಿಚಾರಕರನ್ನು ವಿಚಾರಿಸುತ್ತಿರುವುದು ಕಂಡುಬಂದಿದೆ.

Similar News