ಕೇವಲ ಕೆಚಪ್‌ ತಿಂದು 24 ದಿನ ಸಮುದ್ರ ಮಧ್ಯ ಬದುಕುಳಿದ ವ್ಯಕ್ತಿ!

Update: 2023-01-20 12:59 GMT

 ಹೊಸದಿಲ್ಲಿ : ಕ್ಯಾರಿಬಿಯನ್‌ನ ಡೊಮಿನಿಕಾ(carribean dominica) ದ್ವೀಪದ ವ್ಯಕ್ತಿಯೊಬ್ಬ ಸಮುದ್ರ ಮದ್ಯದಲ್ಲಿ 24 ದಿನಗಳ ಕಾಲ ಕೇವಲ ಕೆಚಪ್‌(ketchup) ತಿಂದು ಬದುಕುಳಿದುಕೊಂಡಿದ್ದಾಗಿ ಹೇಳಿಕೊಂಡಿದ್ದಾನೆ.

"ನನ್ನ ಬಳಿ ಆಹಾರವಿರಲಿಲ್ಲ. ದೋಣಿಯಲ್ಲಿ ಕೇವಲ ಒಂದು ಬಾಟಲಿ ಕೆಚಪ್‌, ಬೆಳ್ಳುಳ್ಳಿ ಹುಡಿ ಮತ್ತು ಬೊಯಿಲ್ಲನ್‌ ಕ್ಯೂಬ್‌ಗಳಿದ್ದವು. ಅದನ್ನು ನೀರಿನಲ್ಲಿ ಬೆರೆಸಿ ತಿಂದು ಸಮುದ್ರ ಮಧ್ಯದಲ್ಲಿ 24 ದಿನಗಳ ಕಾಲ ಬದುಕುಳಿದೆ," ಎಂದು ಎಲ್ವಿಸ್‌ ಫ್ರಾಂಕೋಯಿಸ್‌ ಎಂಬ 47 ವರ್ಷದ ವ್ಯಕ್ತಿ ಹೇಳುತ್ತಿರುವ ವೀಡಿಯೋವೊಂದನ್ನು ಕೊಲಂಬಿಯನ್‌ ನೇವಿ ಬಿಡುಗಡೆಗೊಳಿಸಿದೆ.

ಡಿಸೆಂಬರ್‌ ತಿಂಗಳಿನಲ್ಲಿ ಸೈಂಟ್‌ ಮಾರ್ಟೀನ್‌ ದ್ವೀಪದಲ್ಲಿ  ಬಂದರು ಪ್ರದೇಶದಲ್ಲಿ ಹಾಯಿದೋಣಿಯೊಂದನ್ನು ಎಲ್ವಿಸ್‌ ದುರಸ್ತಿಗೊಳಿಸುತ್ತಿದ್ದಾಗ ಪ್ರತಿಕೂಲ ಹವಾಮಾನದಿಂದಾಗಿ ಆತ ದೋಣಿ ಸಮೇತ ಸಮುದ್ರದಲ್ಲಿ ತೇಲಿ ಹೋಗಿದ್ದ. ದೋಣಿಯನ್ನು ನಡೆಸುವುದು ತಿಳಿದಿರದೇ ಇದ್ದುದರಿಂದ ಆತ ಸಮುದ್ರ ಮಧ್ಯದಲ್ಲಿಯೇ ಉಳಿಯುವಂತಾಗಿತ್ತು

ಮಳೆ ಬಂದಾಗ ಬಟ್ಟೆಯಲ್ಲಿ ನೀರು ಸಂಗ್ರಹಿಸಿ ನಂತರ ಅದನ್ನು ಕುಡಿದಿದ್ದಾಗಿಯೂ ಆತ ಹೇಳಿಕೊಂಡಿದ್ದಾನೆ. ತನ್ನ ದೋಣಿಯಲ್ಲಿ ಆತ ಹೆಲ್ಪ್‌ Help (ಸಹಾಯ) ಪದಗಳನ್ನು ಕೆತ್ತಿ ಯಾವುದಾದರೂ ವಿಮಾನದಲ್ಲಿರುವವರು ಗಮನಿಸಬಹುದೆಂಬ ಆಶಾವಾದದಲ್ಲಿದ್ದ. ಕೊನೆಗೂ ಆತ ಪೂರ್ಟೊ ಬೊಲಿವಾರ್‌ನ ವಾಯುವ್ಯ ದಿಕ್ಕಿನಲ್ಲಿ 120 ನಾಟಿಕಲ್‌ ಮೈಲಿ ದೂರದಲ್ಲಿ ಪತ್ತೆಯಾಗಿದ್ದಾನೆ.

ಸಮುದ್ರ ಮಧ್ಯದಲ್ಲಿ ದಾರಿ ತಪ್ಪಿದಾಗ ಇತರ ಹಡಗುಗಳನ್ನು ನೋಡಿದ್ದರೂ ಅದರಲ್ಲಿರುವವರ ಗಮನ ಸೆಳೆಯಲು ಸಾಧ್ಯವಾಗಿರಲಿಲ್ಲ. ದೋಣಿಯಲ್ಲಿ ಕೆಲ ವಸ್ತುಗಳಿಗೆ ಬೆಂಕಿ ಹಾಕಿ ಇತರ ಹಡಗುಗಳ ಗಮನ ಸೆಳೆಯಲೂ ಆತ ವಿಫಲನಾದ. ಕೊನೆಗೆ ವಿಮಾನವೊಂದು ಹಾರಾಟ ನಡೆಸುತ್ತಿದ್ದಾಗ ಕನ್ನಡಿಯನ್ನು ಪ್ರತಿಫಲಿಸಿ ಗಮನ ಸೆಳೆಯಲು ಸಫಲನಾಗಿದ್ದ. ವಿಮಾನದಲ್ಲಿದ್ದವರು ನೌಕಾದಳಕ್ಕೆ ತಿಳಿಸಿದ ನಂತರ  ಆತನನ್ನು ರಕ್ಷಿಸಲಾಯಿತು.

Similar News