ಟಿಬೆಟ್: ಹಿಮಪಾತಕ್ಕೆ ಬಲಿಯಾದವರ ಸಂಖ್ಯೆ 20ಕ್ಕೆ ಏರಿಕೆ
Update: 2023-01-20 23:01 IST
ಟಿಬೆಟ್, ಜ.20: ಟಿಬೆಟ್ನ ನೈಋತ್ಯ ಪ್ರದೇಶದ ನ್ಯಿಂಗ್ಚಿ ನಗರದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಮೃತಪಟ್ಟವರ ಸಂಖ್ಯೆ 20ಕ್ಕೇರಿದ್ದು ಇನ್ನೂ 8 ಮಂದಿ ನಾಪತ್ತೆಯಾಗಿರುವುದಾಗಿ ಸರಕಾರಿ ಸ್ವಾಮ್ಯದ ‘ಕ್ಸಿನ್ಹುವಾ’ ಸುದ್ಧಿಸಂಸ್ಥೆ ವರದಿ ಮಾಡಿದೆ.
ಮೈನ್ಲಿಂಗ್ ಕೌಂಟಿಯ ಪಾಯಿ ಗ್ರಾಮ ಹಾಗೂ ಮೆಡಾಗ್ ಕೌಂಟಿಯ ಡೋಕ್ಸೋಂಗ್ ಲಾ ಸುರಂಗ ಮಾರ್ಗದ ದ್ವಾರವನ್ನು ಸಂಧಿಸುವ ರಸ್ತೆಯಲ್ಲಿ ಹಿಮಪಾತ ಸಂಭವಿಸಿದ್ದು ಹಿಮಪಾತದಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಇದುವರೆಗೆ 53 ಮಂದಿಯನ್ನು ರಕ್ಷಿಸಲಾಗಿದ್ದು ಇವರಲ್ಲಿ 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪ್ರಾಂತಕ್ಕೆ 696 ವೃತ್ತಿಪರ ರಕ್ಷಣಾ ಕಾರ್ಯಕರ್ತರನ್ನು ರವಾನಿಸಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಸಿಸಿಟಿವಿ ವರದಿ ಮಾಡಿದೆ.