ನೆರೆಮನೆಯ ಸಾಕು ನಾಯಿಯನ್ನು ‘ನಾಯಿ’ ಎಂದು ಕರೆದದ್ದಕ್ಕೆ ಹತ್ಯೆ!

Update: 2023-01-21 10:49 GMT

ಮಧುರೈ: ಸಾಕು ನಾಯಿಯನ್ನು ಅದರ ಹೆಸರಿಡಿದು ಕರೆಯದೆ ಕೇವಲ ನಾಯಿ ಎಂದು ಕರೆದದ್ದಕ್ಕೆ 62 ವರ್ಷದ ವೃದ್ಧರೊಬ್ಬರನ್ನು ನೆರೆಮನೆಯ ಸದಸ್ಯರು ಹತ್ಯೆಗೈದಿರುವ ಘಟನೆ ಗುರುವಾರ ದಿಂಡಿಗಲ್ ಜಿಲ್ಲೆಯಲ್ಲಿ ನಡೆದಿದೆ ಎಂದು timesofindia.com ವರದಿ ಮಾಡಿದೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ನಿರ್ಮಲಾ ಫಾತಿಮಾ ರಾಣಿ ಮತ್ತು ಆಕೆಯ ಪುತ್ರರಾದ ಡೇನಿಯಲ್ ಮತ್ತು ವಿನ್ಸೆಂಟ್ ತಮ್ಮ ಸಂಬಂಧಿ ಹಾಗೂ ನೆರೆಮನೆಯ ರಾಯಪ್ಪನ್ ಎಂಬುವವರಿಗೆ ತಮ್ಮ ಸಾಕು ನಾಯಿಯನ್ನು ಕೇವಲ ನಾಯಿ ಎಂದು ಕರೆಯದಂತೆ ಹಲವಾರು ಬಾರಿ ಎಚ್ಚರಿಕೆ ನೀಡಿದ್ದರು. ಅದಕ್ಕೆ ರಾಯಪ್ಪನ್, ನಾಯಿಗೆ ಕೊರಳು ಪಟ್ಟಿ ಹಾಕುವಂತೆ ಅವರಿಗೆ ಸೂಚಿಸಿದ್ದರು ಎಂದು ತಿಳಿಸಿದ್ದಾರೆ.

ಆದರೆ, ಗುರುವಾರ ಈರ್ವರ ನಡುವೆ ಮುಖಾಮುಖಿ ಸನ್ನಿವೇಶ ಏರ್ಪಟ್ಟಿದೆ. ತಮ್ಮ ಮನೆ ಮುಂದಿನ ಹುಲ್ಲುಹಾಸಿನ ಮೇಲೆ ಹರಿಯುತ್ತಿದ್ದ ನೀರನ್ನು ನಿಲುಗಡೆ ಮಾಡುವಂತೆ ತಮ್ಮ ಮೊಮ್ಮಗನಿಗೆ ಸೂಚಿಸಿರುವ ರಾಯಪ್ಪನ್,  ನಾಯಿ ಅಲ್ಲೇ ಸುಳಿದಾಡುವುದರಿಂದ ಕೋಲು ತೆಗೆದುಕೊಂಡು ಹೋಗು ಎಂದು ಹೇಳಿದ್ದಾರೆ.

ಈ ಮಾತು ಕೇಳಿಸಿಕೊಂಡು ವ್ಯಗ್ರನಾದ ಡೇನಿಯಲ್, ರಾಯಪ್ಪನ್ ಅವರ ಎದೆಗೆ ಗುದ್ದಿದ್ದಾನೆ. ಆ ಗುದ್ದಿನ ರಭಸಕ್ಕೆ ಕುಸಿದು ಬಿದ್ದಿರುವ ರಾಯಪ್ಪನ್, ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ನಂತರ ಡೇನಿಯಲ್ ಮತ್ತು ಆತನ ಕುಟುಂಬದ ಸದಸ್ಯರು ಮನೆಯಿಂದ ಪರಾರಿಯಾಗಿದ್ದರು. ಶುಕ್ರವಾರ ನಿರ್ಮಲಾ ಮತ್ತು ಆಕೆಯ ಪುತ್ರರನ್ನು ಪೊಲೀಸರು ಬಂಧಿಸಿದ್ದಾರೆ.

Similar News