ಪ್ರಧಾನಿ ಮೋದಿ ಕುರಿತ BBC ಸಾಕ್ಷ್ಯಚಿತ್ರವಿರುವ ಟ್ವೀಟ್‌ಗಳನ್ನು ನಿರ್ಬಂಧಿಸಿದ ಕೇಂದ್ರ ಸರಕಾರ

ಸಾಕ್ಷ್ಯಚಿತ್ರದ ಲಿಂಕ್ ಗಳನ್ನು ತೆಗೆದುಹಾಕುವಂತೆ ಯೂಟ್ಯೂಬ್ ಗೆ ಸೂಚನೆ

Update: 2023-01-21 11:42 GMT

ಹೊಸದಿಲ್ಲಿ: ಗುಜರಾತ್ ನಲ್ಲಿ 2002ರಲ್ಲಿ ನಡೆದ ಹಿಂಸಾಚಾರ ಹಾಗೂ ಪ್ರಧಾನಿ ನರೇಂದ್ರ ಮೋದಿ (PM Narendra Modi) ಕುರಿತ BBCಯ ಸಾಕ್ಷ್ಯಚಿತ್ರದ ಲಿಂಕ್ ಗಳನ್ನು ತೆಗೆದುಹಾಕುವಂತೆ ಟ್ವಿಟರ್ (Twitter) ಹಾಗೂ ಯೂಟ್ಯೂಬ್ (Youtube) ಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ ಎಂದು ತಿಳಿದು ಬಂದಿದೆ.

"ಇಂಡಿಯಾ- ದಿ ಮೋದಿ ಕ್ವೆಶ್ಚನ್" ಎಂಬ ಹೆಸರಿನ ಈ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ಹಲವು ಟ್ವೀಟ್ ಗಳು ಹಾಗೂ ಯೂಟ್ಯೂಬ್ ವೀಡಿಯೋಗಳು ಈಗಾಗಲೇ ಟ್ವಿಟರ್ ಮತ್ತು ವೀಡಿಯೋ ಶೇರಿಂಗ್ ವೆಬ್ಸೈಟ್ ಗಳಲ್ಲಿ ಕಾಣಿಸುತ್ತಿಲ್ಲ.

ಬಿಬಿಸಿಯ ಸಾಕ್ಷ್ಯಚಿತ್ರದ ಮೊದಲ ಭಾಗವನ್ನು ನಿರ್ಬಂಧಿಸುವಂತೆ ಟ್ವಿಟರ್ ಮತ್ತು ಯೂಟ್ಯೂಬ್ ಗಳಿಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸೂಚಿಸಿದೆ ಎಂದು ತಿಳಿದು ಬಂದಿದೆ. ಸಾಕ್ಷ್ಯಚಿತ್ರದ ಕುರಿತಾದ ಸುಮಾರು 50 ಟ್ವೀಟ್ ಗಳನ್ನು ತೆಗೆದುಹಾಕುವಂತೆ ಟ್ವಿಟರ್ ಗೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ.

ಅಂತೆಯೇ ಟಿಎಂಸಿ ಸಂಸದ ಡೆರೆಕ್ ಒʼಬ್ರಿಯಾನ್ ಸಹಿತ ಹಲವರ ಟ್ವೀಟ್ ಗಳನ್ನು ತೆಗೆದುಹಾಕಲಾಗಿದೆ.

ಭಾರತದ ಐಟಿ ನಿಯಮಗಳು 2021 ಅಡಿಯಲ್ಲಿನ ತುರ್ತು ಅಧಿಕಾರ ಬಳಸಿ ಈ ಆದೇಶವನ್ನು ಕೇಂದ್ರ ಸಚಿವಾಲಯ ನೀಡಿದ್ದು ಯುಟ್ಯೂಬ್ ಮತ್ತು ಟ್ವಿಟರ್ ಇದಕ್ಕೆ ಬದ್ಧವಾಗಲು ಒಪ್ಪಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿದ ಸಂಸದ "ಇದು ಸೆನ್ಸಾರ್ಶಿಪ್, ಬಿಬಿಸಿ ಸಾಕ್ಷ್ಯಚಿತ್ರದ ನನ್ನ ಟ್ವೀಟ್ ಅನ್ನು ಟ್ವಿಟರ್ ತೆಗೆದುಹಾಕಿದೆ. ಪ್ರಧಾನಿ ಅಲ್ಪಸಂಖ್ಯಾತರನ್ನು ಹೇಗೆ ದ್ವೇಷಿಸುತ್ತಾರೆ ಎಂಬುದನ್ನು ಬಿಬಿಸಿ ಯ ಈ ಒಂದು ಗಂಟೆ ಅವಧಿಯ ಸಾಕ್ಷ್ಯಚಿತ್ರ ತೋರಿಸುತ್ತದೆ," ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೆರೆಮನೆಯ ಸಾಕು ನಾಯಿಯನ್ನು ‘ನಾಯಿ’ ಎಂದು ಕರೆದದ್ದಕ್ಕೆ ಹತ್ಯೆ!

Similar News