ಕಾಂಗ್ರೆಸ್ ಪಕ್ಷದಿಂದ ಕೇಂದ್ರ ಸರ್ಕಾರದ ವಿರುದ್ಧದ ʻಚಾರ್ಜ್ ಶೀಟ್ʼ ಬಿಡುಗಡೆ

ಬಿಜೆಪಿಯನ್ನು ʻಭ್ರಷ್ಟ ಜುಮ್ಲಾ ಪಕ್ಷʼ ಎಂದು ವರ್ಣನೆ

Update: 2023-01-21 13:25 GMT

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷ ಶನಿವಾರ ಎಐಸಿಸಿ ಮುಖ್ಯ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧದ ʼಚಾರ್ಜ್ ಶೀಟ್ʼ ಅನ್ನು ಬಿಡುಗಡೆಗೊಳಿಸಿದೆ. ಅದರಲ್ಲಿ ಬಿಜೆಪಿಯನ್ನು "ಭ್ರಷ್ಟ ಜುಮ್ಲಾ ಪಕ್ಷ" ಎಂದು ಬಣ್ಣಿಸಲಾಗಿದೆ ಹಾಗೂ ಆ ಪಕ್ಷದ ಮಂತ್ರ ʼಕುಚ್ ಕಾ ಸಾಥ್, ಖುದ್ ಕಾ ವಿಕಾಸ್, ಸಬ್ ಕೇ ಸಾಥ್ ವಿಶ್ವಾಸ್ಘಾತ್" ಎಂದು ಅದರಲ್ಲಿ ಹೇಳಲಾಗಿದೆ (ಕೆಲವರಿಗೆ ಲಾಭ, ಸ್ವಂತ ಅಭಿವೃದ್ಧಿ ಹಾಗೂ ಎಲ್ಲರಿಗೂ ವಿಶ್ವಾಸದ್ರೋಹವೆಸಗುವುದು).

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮತ್ತು ಸಂವಹನ ವಿಭಾಗದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಈ ʼಚಾರ್ಜ್ ಶೀಟ್ʼ ಬಿಡುಗಡೆಗೊಳಿಸಿದ್ದಾರೆ. ಈ ಚಾರ್ಜ್ ಶೀಟ್ ಅನ್ನು ʼಕುಚ್ ಕಾ ಸಾಥ್ʼ, ʼಖುದ್ ಕಾ ವಿಕಾಶ್ʼ ಮತ್ತು ʼಸಬ್ ಸೇ ವಿಶ್ವಾಸ್ಘಾತ್ʼ ಎಂದು ಮೂರು ವಿಭಾಗಗಳನ್ನಾಗಿಸಲಾಗಿದೆ.

ಮೊದಲ ಭಾಗದಲ್ಲಿ ಕೆಲ ಆಯ್ದ ಉದ್ಯಮಿಗಳಿಗೆ ಸಾಲ ಮನ್ನಾ,  ಭಾರತದ ಶೇ 64ರಷ್ಟು ಸಂಪತ್ತು ಶೇ 10 ಶ್ರೀಮಂತರ ಬಳಿ ಇರುವುದು ಹಾಗೂ ಬಂದರುಗಳು ಮತ್ತು ವಿಮಾನ ನಿಲ್ದಾಣಗಳನ್ನು ಪ್ರಧಾನಿಯ ʼಆತ್ಮೀಯ ಮಿತ್ರರಿಗೆʼ ನೀಡಿರುವ ಬಗ್ಗೆ ಉಲ್ಲೇಖಿಸಲಾಗಿದೆ.

ಎರಡನೇ ಭಾಗದಲ್ಲಿ, ಬಿಜೆಪಿ  ಪ್ರಚಾರಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆಯಲ್ಲದೆ ಸ್ವಜನ ಪಕ್ಷಪಾತದ ಆರೋಪವನ್ನೂ ಹೊರಿಸಿದೆ.

ಮೂರನೇ ಭಾಗದಲ್ಲಿ ನಿರುದ್ಯೋಗ, ಮಹಿಳಾ ಸುರಕ್ಷತೆ, ರೈತರ ಸಮಸ್ಯೆ, ದ್ವೇಷದ ಭಾಷಣಗಳು, ಚುನಾಯಿತ ಸರ್ಕಾರಗಳನ್ನು ಉರುಳಿಸುವುದು, ಅಂತಾರಾಷ್ಟ್ರೀಯ ವಿವಿಧ ಸೂಚ್ಯಂಕಗಳಲ್ಲಿ ಭಾರತದ ಸ್ಥಾನ ಮುಂತಾದ ವಿಚಾರಗಳ ಬಗ್ಗೆ ಬರೆಯಲಾಗಿದೆ.

Similar News