×
Ad

ನಟಿ ಅಪರ್ಣಾ ಬಾಲಮುರಳಿಯೊಂದಿಗೆ ಅನುಚಿತ ವರ್ತನೆ: ವಿದ್ಯಾರ್ಥಿ ಅಮಾನತು

Update: 2023-01-21 19:06 IST

ತಿರುವನಂತಪುರ: ಎರ್ನಾಕುಲಂ ಕಾನೂನು ಕಾಲೇಜಿನಲ್ಲಿ ನಟಿ ಅಪರ್ಣಾ ಬಾಲಮುರಳಿ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ವಿದ್ಯಾರ್ಥಿಯನ್ನು ಶುಕ್ರವಾರ, ಜನವರಿ 20 ರಂದು ಅಮಾನತುಗೊಳಿಸಲಾಗಿದೆ. 

ಅಪರ್ಣಾ ಮತ್ತು ನಟ ವಿನೀತ್ ಶ್ರೀನಿವಾಸನ್ ಮತ್ತು ಚಿತ್ರತಂಡದ ಇತರ ಸದಸ್ಯರು ತಮ್ಮ ಚಿತ್ರ ʼತಂಕಂʼ ಪ್ರಚಾರಕ್ಕಾಗಿ ಕಾಲೇಜಿಗೆ ಭೇಟಿ ನೀಡಿದ್ದರು. ಈ ವೇಳೆ ಫೋಟೋ ಕ್ಲಿಕ್ಕಿಸುವ ನೆಪದಲ್ಲಿ ವಿದ್ಯಾರ್ಥಿಯೊಬ್ಬ ನಟಿ ಹೆಗಲಿಗೆ ಕೈ ಹಾಕಿರುವ ಘಟನೆ ನಡೆದಿತ್ತು. ಘಟನೆಯ ವಿಡಿಯೋ ವ್ಯಾಪಕ ವೈರಲ್‌ ಆದ ಬಳಿಕ ಆಕ್ರೋಶ ವ್ಯಕ್ತವಾಗಿತ್ತು.

ಎರ್ನಾಕುಲಂ ಲಾ ಕಾಲೇಜ್ ಯೂನಿಯನ್ ನಟಿ ಬಳಿ ಕ್ಷಮೆಯಾಚಿಸಿದೆ. ನಟಿಗೆ ನಡೆದ ಅನಾನುಕೂಲವಾದ ಘಟನೆಗಾಗಿ ಒಕ್ಕೂಟವು ಅತ್ಯಂತ ವಿಷಾದಿಸುತ್ತಿದೆ ಘಟನೆಯು ಗಂಭೀರ ಸಮಸ್ಯೆಯಾಗಿದ್ದು, ಇದು ಪುನರಾವರ್ತನೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಂಘವು ಹೇಳಿದೆ.
 
ಅಪರ್ಣಾ ಜೊತೆ ಅನುಚಿತವಾಗಿ ವರ್ತಿಸಿದ ವಿದ್ಯಾರ್ಥಿ ಕೂಡ ನಂತರ ವೇದಿಕೆ ಮೇಲೆ ಬಂದು ನಟಿ ಬಳಿ ಕ್ಷಮೆ ಕೇಳಿದ್ದು, ಹಸ್ತಲಾಘವ ಮಾಡಲು ಕೈ ಮುಂದೆ ಮಾಡಿದ್ದಾನೆ. ಆದರೆ ನಟಿ ನಯವಾಗಿ ಅದನ್ನು ತಿರಸ್ಕರಿಸಿದ್ದಾರೆ. ಈ ವಿಡಿಯೋ ಕೂಡಾ ವೈರಲ್‌ ಆಗಿದೆ.

Similar News