‘ಪಠಾಣ್’ ಚಿತ್ರದ ಪ್ರದರ್ಶನ ವೇಳೆ ಅಹಿತಕರ ಘಟನೆ ನಡೆಯದು: ಶಾರೂಖ್ ಗೆ ಭರವಸೆ ನೀಡಿದ ಅಸ್ಸಾಂ ಸಿಎಂ

ಶಾರೂಖ್‌ ಯಾರು? ಎಂದು ಪ್ರಶಿಸಿದ್ದ ಕೆಲ ಸಮಯದಲ್ಲೇ ಬಾಲಿವುಡ್‌ ನಟನಿಂದ ಕರೆ

Update: 2023-01-22 08:30 GMT

ಗುವಾಹಟಿ: ‘ಪಠಾಣ್’ ಚಿತ್ರದ ಪ್ರದರ್ಶನದ ವೇಳೆ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯುವುದಿಲ್ಲ ಎಂದು ನಟ ಶಾರುಖ್ ಖಾನ್ ಅವರಿಗೆ ನಾನು ಭರವಸೆ ನೀಡಿದ್ದೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ(Himanta Biswa Sarma) ರವಿವಾರ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಶಾರುಖ್  ಖಾನ್, ದೀಪಿಕಾ ಪಡುಕೋಣೆ ಹಾಗೂ  ಜಾನ್ ಅಬ್ರಹಾಂ ಅಭಿನಯದ ‘ಪಠಾಣ್’ ಚಿತ್ರ ಜನವರಿ 25 ರಂದು ಬಿಡುಗಡೆಯಾಗಲಿದೆ.

ಶುಕ್ರವಾರ ಹಿಂದುತ್ವ ಸಂಘಟನೆಯಾದ  ಬಜರಂಗದಳದ ಸದಸ್ಯರು ಮುಂಬರುವ ಚಿತ್ರದ ಪೋಸ್ಟರ್‌ಗಳನ್ನು ಹರಿದು ಹಾಕಿ ಗುವಾಹಟಿಯ ಥಿಯೇಟರ್‌ನಲ್ಲಿ ಬೆಂಕಿ ಹಚ್ಚಿದ ನಂತರ ಶರ್ಮಾ ಅವರಿಂದ ಈ  ಹೇಳಿಕೆ ಬಂದಿದೆ ಎಂದು "North East Now'' ವರದಿ ಮಾಡಿದೆ.

"ಬಾಲಿವುಡ್ ನಟ ಶಾರುಖ್ ಖಾನ್ ನನಗೆ ಕರೆ ಮಾಡಿದ್ದರು. ನಾವಿಬ್ಬರು  ಇಂದು ಮುಂಜಾನೆ  2 ಗಂಟೆಗೆ ಮಾತನಾಡಿದ್ದೇವೆ. ತಮ್ಮ ಚಿತ್ರದ ಪ್ರದರ್ಶನದ ವೇಳೆ ಗುವಾಹಟಿಯಲ್ಲಿ ನಡೆದ ಘಟನೆಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದರು. ಕಾನೂನು ಹಾಗೂ  ಸುವ್ಯವಸ್ಥೆಯನ್ನು ಕಾಪಾಡುವುದು ರಾಜ್ಯ ಸರಕಾರದ ಕರ್ತವ್ಯ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ’’ ಎಂದು ಶರ್ಮಾ ರವಿವಾರ ಟ್ವೀಟ್ ಮಾಡಿದ್ದಾರೆ.

ಶುಕ್ರವಾರ ಸಿನಿಮಾ ಹಾಲ್‌ನಲ್ಲಿ ನಡೆದಿದ್ದ ವಿಧ್ವಂಸಕ ಕೃತ್ಯಕ್ಕೆ ಶರ್ಮಾ ಏನೂ ಗೊತ್ತಿಲ್ಲ ಎಂದು ಹೇಳಿ ಅಜ್ಞಾನ ಪ್ರದರ್ಶಿಸಿದ್ದರು.

"ಶಾರುಖ್ ಖಾನ್ ಯಾರು? ಅವರ ಬಗ್ಗೆ ಅಥವಾ ಅವರ ಚಿತ್ರ 'ಪಠಾಣ್' ಬಗ್ಗೆ ನನಗೆ ಏನೂ ತಿಳಿದಿಲ್ಲ ಎಂದು  ಸುದ್ದಿಗಾರರು  ಘಟನೆಯ ಬಗ್ಗೆ ಕೇಳಿದಾಗ ಶರ್ಮಾ ಪ್ರತಿಕ್ರಿಯಿಸಿದ್ದರು ಎಂದು ಪಿಟಿಐ ವರದಿ ಮಾಡಿದೆ.

“ಬಾಲಿವುಡ್‌ನಿಂದ ಅನೇಕರು ಸಮಸ್ಯೆಯ ಬಗ್ಗೆ ಫೋನ್ ಮಾಡಿದರೂ ಖಾನ್ ನನಗೆ ಕರೆ ಮಾಡಿಲ್ಲ. ಆದರೆ ಅವರು ಕರೆ ಮಾಡಿದರೆ, ನಾನು ವಿಷಯವನ್ನು ಪರಿಶೀಲಿಸುತ್ತೇನೆ. ಕಾನೂನು ಸುವ್ಯವಸ್ಥೆ ಉಲ್ಲಂಘನೆಯಾಗಿ  ಪ್ರಕರಣ ದಾಖಲಿಸಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು'' ಎಂದಿದ್ದರು. ಈ ಹೇಳಿಕೆ ನೀಡಿದ ಕೆಲ ಸಮಯದಲ್ಲೇ ಶಾರೂಖ್‌ ಖಾನ್‌ ಶರ್ಮಾರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.

Similar News