ಭಯೋತ್ಪಾದನೆ ನಿಗ್ರಹ ಅಣಕು ಕಾರ್ಯಾಚರಣೆ; ನಿರ್ದಿಷ್ಟ ಸಮುದಾಯದ ಕುರಿತು ಘೋಷಣೆ ಕೂಗಿದ ಪೊಲೀಸ್ ಸಿಬ್ಬಂದಿ

Update: 2023-01-22 15:45 GMT

ಮುಂಬೈ, ಜ. 22: ಭಯೋತ್ಪಾದಕರ ವೇಷ ಧರಿಸಿದ್ದ ಪೊಲೀಸ್ ಸಿಬ್ಬಂದಿ ನಿರ್ದಿಷ್ಟ ಸಮುದಾಯಕ್ಕೆ ಸಂಬಂಧಿಸಿದ ಘೋಷಣೆಗಳನ್ನು ಕೂಗಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಚಂದ್ರಾಪುರ ದೇವಾಲಯದಲ್ಲಿ ನಡೆದ ಪೊಲೀಸ್ ಅಣಕು ಕಾರ್ಯಾಚರಣೆ ವಿವಾದಕ್ಕೆ ಸಿಲುಕಿದೆ. ಈ ಘಟನೆಗೆ ಸಂಬಂಧಿಸಿ ವಕೀಲರ ಗುಂಪೊಂದು ಜಿಲ್ಲಾ ಪೊಲೀಸ್ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದೆ.

ಈ ಹಿನ್ನಲೆಯಲ್ಲಿ ಪೊಲೀಸ್ ಅಧೀಕ್ಷಕ ರವೀಂದ್ರ ಸಿಂಗ್(Ravinder Singh) ಪರ್ದೇಶಿ ಅವರು, ಇಂತಹ ಪ್ರಮಾದಗಳು ಪುನರಾವರ್ತನೆಯಾಗದಂತೆ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುವುದಾಗಿ ರವಿವಾರ ಭರವಸೆ ನೀಡಿದ್ದಾರೆ. ಇಲ್ಲಿನ ಜನಪ್ರಿಯ ಮಹಾಕಾಳಿ ದೇವಾಲಯದಲ್ಲಿ ಜನವರಿ 11ರಂದು ಅಣಕು ಕಾರ್ಯಾಚರಣೆ ಆಯೋಜಿಸಲಾಗಿತ್ತು. ಈ ಅಣಕು ಕಾರ್ಯಾಚರಣೆಯಲ್ಲಿ ಭಯೋತ್ಪಾದಕರು ದೇವಾಲಯವೊಂದರ ಮೇಲೆ ದಾಳಿ ನಡೆಸುವುದು ಅಲ್ಲಿನ ಭಕ್ತರನ್ನು ವಶದಲ್ಲಿ ಇರಿಸಿಕೊಳ್ಳುವುದು ಹಾಗೂ ಅನಂತರ ಭದ್ರತಾ ಪಡೆಯಿಂದ ಬಂಧಿತರಾಗುವ ದೃಶ್ಯವನ್ನು ಅಭಿನಯಿಸಲಾಗಿತ್ತು.

‘‘ಭಯೋತ್ಪಾದಕರ ಪಾತ್ರ ನಿರ್ವಹಿಸಿದ್ದ ಪೊಲೀಸ್ ಸಿಬ್ಬಂದಿ ನಿರ್ದಿಷ್ಟ ಸಮುದಾಯದ ವಿರುದ್ಧ ಘೋಷಣೆಗಳನ್ನು ಕೂಗುವುದು ವೀಡಿಯೊದಲ್ಲಿ ದಾಖಲಾಗಿದೆ. ಇದು ಒಂದು ಸಮುದಾಯವನ್ನು ನಕಾರಾತ್ಮಕವಾಗಿ ಹಾಗೂ ಆ ಸಮುದಾಯಕ್ಕೆ ಸೇರಿದವರು ಎಲ್ಲರೂ ಭಯೋತ್ಪಾದಕರು ಎಂದು ಬಿಂಬಿಸುತ್ತದೆ’’ ಎಂದು ಇಲ್ಲಿನ ವಕೀಲರ ಗುಂಪಿನ ಭಾಗವಾಗಿರುವ ಫರ್ಹಾತ್ ಬೇಗ್ ತಿಳಿಸಿದ್ದಾರೆ.

‘‘ಇಂತಹ ಘೋಷಣೆ ಹಾಗೂ ಚಿತ್ರಣದ ವಿರುದ್ಧ ನಾವು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಮನವಿ ಸಲ್ಲಿಸಿದ್ದೇವೆ. ಪೊಲೀಸರ ಈ ಕೃತ್ಯ ಒಂದು ಸಮುದಾಯಕ್ಕೆ ಅವಮಾನ ಉಂಟು ಮಾಡುತ್ತಿದೆ. ಅಣಕು ಕಾರ್ಯಾಚರಣೆಯ ಸ್ಕ್ರಿಪ್ಟ್ ಅನ್ನು ಪೊಲೀಸ್ ಅಧೀಕ್ಷಕರು ಹಾಗೂ ಇತರ ಹಿರಿಯ ಅಧಿಕಾರಿಗಳು ಪರಿಶೀಲನೆ ಮಾಡಿರಬೇಕು’’ ಎಂದು ಬೇಗ್ ಹೇಳಿದ್ದಾರೆ. ಸ್ಥಳೀಯ ಪೊಲೀಸ್, ಭಯೋತ್ಪಾದನಾ ನಿಗ್ರಹ ದಳ, ವಿಶೇಷ ಸಮರ ಘಟಕ ಸಿ-60ನ ಸಿಬ್ಬಂದಿ ಹಾಗೂ ಇತರರು ಈ ಅಣಕು ಕಾರ್ಯಾಚರಣೆ ನಡೆಸಿದ್ದರು.

Similar News