ಮದುವೆ ಮತ್ತು ವೈಯಕ್ತಿಕ ಕುಟುಂಬ ವಿಚಾರಗಳನ್ನು ಬಿಚ್ಚಿಟ್ಟ ರಾಹುಲ್ ಗಾಂಧಿ ಹೇಳಿದ್ದೇನು?

Update: 2023-01-23 10:19 GMT

ಹೊಸದಿಲ್ಲಿ: ಮದುವೆ ಬಗ್ಗೆ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ "ಸರಿಯಾದ ಹುಡುಗಿ ಸಿಕ್ಕಾಗ" ಮದುವೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.  ಭಾರತ್ ಜೋಡೋ ಯಾತ್ರೆಯ ನಡುವೆ ಬಿಡುವು ಮಾಡಿಕೊಂಡು, ಆಹಾರ ಮತ್ತು ಪ್ರಯಾಣದ ಬಗೆಗಿನ ಮಾಹಿತಿ ನೀಡುವ Curly Tales ವೆಬ್‌ ಪೋರ್ಟಲ್‌ ನ ಪ್ರಧಾನ ಸಂಪಾದಕರಾದ ಕಾಮ್ಯಾ ಜಾನಿ ಅವರಿಗೆ ನೀಡಿದ ಸಂದರ್ಶನದಲ್ಲಿ ರಾಹುಲ್ ಗಾಂಧಿ ಅವರು ಆಹಾರ, ಪ್ರಯಾಣ, ತನ್ನ ಮದುವೆ ಯೋಜನೆಗಳು, ಮೊದಲ ಸಂಬಳ ಮತ್ತು ತಮ್ಮ ಜೀವನದ ಇತರ ಅಂಶಗಳ ಬಗ್ಗೆ ಮಾತನಾಡಿದ್ದಾರೆ.   

ಸಂದರ್ಶನದ ಭಾಗವಾಗಿ, ನೀವು ಯಾವ ರೀತಿಯ ಹುಡುಗಿಯನ್ನು ಮದುವೆಯಾಗಲು ಬಯಸುತ್ತೀರಿ ಎಂದು ಪ್ರಶ್ನಿಸಿದಾಗ, “ಬುದ್ಧಿವಂತಳಾಗಿರುವ ಒಬ್ಬ ಪ್ರೀತಿಯ ವ್ಯಕ್ತಿಯನ್ನು" ಎಂದು ರಾಹುಲ್ ಉತ್ತರಿಸಿದ್ದಾರೆ.

ಸಂದರ್ಶನದಲ್ಲಿ, ಸ್ಪೇನ್‌ನಾದ್ಯಂತ ತಾನು ಕೈಗೊಂಡ ಏಕಾಂಗಿ  ಬೈಕ್‌ ಟ್ರಿಪ್ ಮತ್ತು ಸ್ಕೂಬಾ ಡೈವರ್ ಆಗಿರುವ ಬಗ್ಗೆ ರಾಹುಲ್ ಮತ್ತಷ್ಟು ಬಿಚ್ಚಿಟ್ಟಿದ್ದಾರೆ.

ತನ್ನ ಶಾಲಾ ಶಿಕ್ಷಣ, ಆರಂಭಿಕ ಜೀವನ, ತನ್ನ ಸಹೋದರಿಯೊಂದಿಗೆ 'ಜಗಳ' ಮೊದಲಾದವುಗಳ ಬಗ್ಗೆ ಸಂದರ್ಶನದಲ್ಲಿ ರಾಹುಲ್‌ ಮಾತನಾಡಿದ್ದಾರೆ. 
ಆಹಾರದ ವಿಚಾರದಲ್ಲಿ ಯಾವುದು ಇಷ್ಟವಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್, ಅವರು ಯಾತ್ರೆಯ ಸಮಯದಲ್ಲಿ "ಏನನ್ನು ಬಡಿಸುತ್ತಾರೋ ಅದನ್ನು ತಿನ್ನುತ್ತೇನೆ" ಎಂದಿದ್ದಾರೆ. ಅದಾಗ್ಯೂ ಬಟಾಣಿ ಹಾಗೂ ಹಲಸು ಬಗ್ಗೆ ತಿನ್ನಲು ಇಷ್ಟಪಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ತನ್ನ ಮನೆಯಲ್ಲಿ ಬಹಳ ಕಟ್ಟು ನಿಟ್ಟಾದ ಡಯಟ್‌ ಅನ್ನು ಫಾಲೋ ಮಾಡುವುದಾದರೂ ಯಾತ್ರೆಯಲ್ಲಿರುವುದರಿಂದ ಆಹಾರದ ವಿಚಾರದಲ್ಲಿ ಹೆಚ್ಚು ಆಯ್ಕೆ ಇಲ್ಲ ಎಂದು ರಾಹುಲ್‌ ತಿಳಿಸಿದ್ದಾರೆ.

ನಾನು ಮಾಂಸಾಹಾರವನ್ನು ಇಷ್ಟಪಡುತ್ತೇನೆ ಮತ್ತು ಕೋಳಿ, ಮಟನ್ ಮತ್ತು ಸಮುದ್ರಾಹಾರ ಸೇರಿದಂತೆ ಎಲ್ಲಾ ರೀತಿಯ ಮಾಂಸವನ್ನು ಇಷ್ಟಪಡುತ್ತೇನೆ ಎಂದು ರಾಹುಲ್ ಹೇಳಿದ್ದಾರೆ.   

ದಿಲ್ಲಿಯಲ್ಲಿ, ಮೋತಿ ಮಹಲ್, ಸಾಗರ್ ಮತ್ತು ಸರವಣ ಭವನ್ ತನ್ನ ನೆಚ್ಚಿನ ರೆಸ್ಟೋರೆಂಟ್‌ಗಳು ಎಂದು ಅವರು ತಿಳಿಸಿದ್ದಾರೆ. ತಂದೂರಿ ಆಹಾರ ಮತ್ತು "ಒಳ್ಳೆಯ ಆಮ್ಲೆಟ್" ಅನ್ನು ಇಷ್ಟಪಡುವುದಾಗಿ ಹೇಳಿದ ರಾಹುಲ್, ಅನ್ನ ಅಥವಾ ರೊಟ್ಟಿಯನ್ನು ಅಷ್ಟಾಗಿ ಇಷ್ಟಪಡುವುದಿಲ್ಲ ಎಂದಿದ್ದಾರೆ. ಮತ್ತು ಸಾಮಾನ್ಯವಾಗಿ ಬೆಳಿಗ್ಗೆ ಕೇವಲ ಒಂದು ಕಪ್ ಕಾಫಿ ಕುಡಿಯುತ್ತಾರೆ ಎಂದವರು ತಿಳಿಸಿದ್ದಾರೆ.

ತನ್ನ ಶಾಲಾ ದಿನಗಳನ್ನು ಮೆಲುಕು ಹಾಕಿದ ರಾಹುಲ್‌ ಗಾಂಧಿ, ಅಜ್ಜಿಯ (ಇಂದಿರಾ ಗಾಂಧಿ) ಹತ್ಯೆಯ ನಂತರ ಭದ್ರತೆಯ ಕಾರಣದಿಂದ ಬೋರ್ಡಿಂಗ್ ಶಾಲೆಯಿಂದ ತೆಗೆದು ಮನೆಯಲ್ಲಿಯೇ ಶಿಕ್ಷಣ ಪಡೆಯಬೇಕಾಯಿತು ಎಂದು ಅವರು ಹೇಳಿದ್ದಾರೆ.

ಕೆಲವು ಶಿಕ್ಷಕರು ಒಳ್ಳೆಯವರಾಗಿದ್ದರು, ಇನ್ನು ಕೆಲವರು ಇದಕ್ಕೆ ಹೊರತಾಗಿಯೂ ಇದ್ದರು ಎಂದು ತಮ್ಮ ಶಿಕ್ಷಕರ ಬಗ್ಗೆ ರಾಹುಲ್‌ ವಿವರಿಸಿದ್ದಾರೆ. 

“ನನ್ನ ಕುಟುಂಬದ ರಾಜಕೀಯ ನಿಲುವು ಬಡವರ ಪರವಾಗಿತ್ತು. ಆದ್ದರಿಂದ ಶಿಕ್ಷಕರಾಗಿರುವ ಬಹಳಷ್ಟು ಜನರು ಅದನ್ನು ಮೆಚ್ಚುತ್ತಿದ್ದಾರೆಂದು ನಾನು ಭಾವಿಸುವುದಿಲ್ಲ. ಆದರೆ ಇತರರು ಒಳ್ಳೆಯವರಾಗಿದ್ದರು” ಅವರು ಹೇಳಿದ್ದಾರೆ.

ಒಂದು ವರ್ಷ ಸೇಂಟ್ ಸ್ಟೀಫನ್ಸ್‌ಗೆ ಹೋಗಿ ಇತಿಹಾಸವನ್ನು ಅಧ್ಯಯನ ಮಾಡಿ, ನಂತರ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಪ್ರವೇಶಿಸಿ ಅಲ್ಲಿ 'ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ರಾಜಕೀಯ'ವನ್ನು ಅಧ್ಯಯನ ಮಾಡಿರುವುದಾಗಿ ರಾಹುಲ್ ಹೇಳಿದ್ದಾರೆ.

ಅದರೆ ತನ್ನ ತಂದೆಯ ಮರಣದ ನಂತರ ಮತ್ತೆ ಭದ್ರತೆಯ ಕಾರಣದಿಂದ ಅಲ್ಲಿಂದ ವರ್ಗಾಯಿಸಬೇಕಾಯಿತು. ನಂತರ, ಅವರು ಫ್ಲೋರಿಡಾದ ಕಾಲೇಜಿಗೆ, ರೋಲಿನ್ಸ್ ಕಾಲೇಜಿಗೆ ಹೋಗಿರುವುದಾಗಿ ಅವರು ತಿಳಿಸಿದ್ದಾರೆ. ಅಲ್ಲಿ ಅವರು ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಅಭಿವೃದ್ಧಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಹೊಂದಿದ್ದಾರೆ ಎಂದು ರಾಹುಲ್‌ ತಿಳಿಸಿದ್ದಾರೆ. 

ತಮ್ಮ ಮೊದಲ ಸಂಬಳದ ವಿವರಗಳನ್ನು ನೀಡಿದ ಅವರು ಲಂಡನ್‌ನಲ್ಲಿ 24-25 ನೇ ವಯಸ್ಸಿನಲ್ಲಿ ಮಾನಿಟರ್ ಎಂಬ ಸ್ಟ್ರಾಟೆಜಿಕ್ ಕನ್ಸಲ್ಟಿಂಗ್ ಕಂಪನಿಯಲ್ಲಿ ಕಾರ್ಪೊರೇಟ್ ಉದ್ಯೋಗವನ್ನು ಪಡೆದಿದ್ದೆ ಎಂದು ಹೇಳಿದ್ದಾರೆ. ತಿಂಗಳಿಗೆ ಸುಮಾರು 2,500-3,000 ಪೌಂಡ್‌ಗಳನ್ನು ಸಂಬಳ ಪಡೆದಿರುವುದಾಗಿ ಅವರು ತಿಳಿಸಿದ್ದಾರೆ. 

ತನ್ನ ತಂದೆಯ ಮರಣವು ತನ್ನ ಕಿರಿಯ ಸಹೋದರಿಯೊಂದಿಗಿನ ಸಂಬಂಧದಲ್ಲಿ ತೀವ್ರ ಬದಲಾವಣೆ ತಂದಿತು ಎಂದು ರಾಹುಲ್ ಹೇಳುತ್ತಾರೆ.

“ನಾವು ನಮ್ಮ ಸುತ್ತಲೂ ಸಂಪೂರ್ಣ ಹಿಂಸಾಚಾರದೊಂದಿಗೆ ಬೆಳೆದಿದ್ದೇವೆ. ಅದು ನಮ್ಮಲ್ಲಿ ಬಹಳಷ್ಟು ಆಂತರಿಕವಾಗಿ ಒತ್ತಡ ಉಂಟುಮಾಡುತ್ತಿತ್ತು. ನಾವು ತುಂಬಾ ಜಗಳವಾಡುತ್ತಿದ್ದೆವು. ಆದರೆ ಪಾಪಾ (ರಾಜಿವ್‌ ಗಾಂಧಿ) ಮೃತಪಟ್ಟ ನಂತರ, ಅದು ನಿಂತುಹೋಯಿತು.” ಎಂದು ರಾಹುಲ್‌ ತಿಳಿಸಿದ್ದಾರೆ. 

ತಮ್ಮ ಗಡ್ಡ ಹಾಗೂ ಕೂದಲಿನ ಬಗ್ಗೆ ಮಾತನಾಡಿದ ರಾಹುಲ್‌, “ಯಾತ್ರೆಯ ಸಮಯದಲ್ಲಿ ನಾನು ನನ್ನ ಗಡ್ಡವನ್ನು ಬೋಳಿಸಿಕೊಳ್ಳಬಾರದು ಅಥವಾ ನನ್ನ ಕೂದಲನ್ನು ಕತ್ತರಿಸಬಾರದು ಎಂದು ನಾನು ಭಾವಿಸಿದೆ. ಚೆನ್ನಾಗಿದೆ. ಅದು ಈಗ ಸ್ವಲ್ಪ ದೊಡ್ಡದಾಗಿದೆ, ದೊಡ್ಡದಾಗುತ್ತಿದೆ. ತಿನ್ನುವಾಗ ಇದು ಸ್ವಲ್ಪ ತೊಂದರೆ ಕೊಡುತ್ತದೆ, ಅದನ್ನು ಬಿಟ್ಟರೆ ಚೆನ್ನಾಗಿದೆ” ಎಂದು ರಾಹುಲ್ ತಮಾಷೆ ಮಾಡಿದ್ದಾರೆ.

Full View

Similar News