ಉಡುಪಿ: ಕಳವು ಪ್ರಕರಣದ ಇಬ್ಬರು ಆರೋಪಿಗಳ ಬಂಧನ

19ಲಕ್ಷ ರೂ. ಮೌಲ್ಯದ ಚಿನ್ನಾಭರಣ, 3 ವಾಹನಗಳು ವಶ

Update: 2023-01-23 14:37 GMT

ಉಡುಪಿ: ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಕಳವು ಆರೋಪಿಗಳಿಬ್ಬರನ್ನು ಕೋಟ ಪೊಲೀಸರು ಜ.22ರಂದು ಕೋಟ ಠಾಣಾ ವ್ಯಾಪ್ತಿಯ ಸಾಬರಕಟ್ಟೆ ಬಳಿ ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾಪು ತಾಲೂಕಿನ ಎಲ್ಲೂರು ಗ್ರಾಮದ ಮಂಜರಬೆಟ್ಟು ನಿವಾಸಿ ರಾಜೇಶ್ ದೇವಾಡಿಗ(38) ಹಾಗೂ ಕಾರ್ಕಳ ಈದು ಗ್ರಾಮದ ಹೊಸ್ಮಾರು ನಿವಾಸಿ ಮುಹಮ್ಮದ್ ರಿಯಾಝ್(39) ಬಂಧಿತ ಆರೋಪಿಗಳು. ಇವರಿಂದ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 2.50ಲಕ್ಷ ರೂ. ಮೌಲ್ಯದ ಕಾರು, ಸುಮಾರು 1 ಲಕ್ಷ ರೂ. ಮೌಲ್ಯದ ಬೈಕ್, ಕೃತ್ಯಕ್ಕೆ ಬಳಸಿದ 50,000ರೂ. ಮೌಲ್ಯದ ಸ್ಕೂಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 19 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಕೋಟ ಠಾಣಾ ವ್ಯಾಪ್ತಿಯ ಬ್ರಹ್ಮಾವರ ತಾಲೂಕು ಪಾಂಡೇಶ್ವರ ಗ್ರಾಮದ ಮಠದ ತೋಟ ಸಾಸ್ತಾನ ಎಂಬಲ್ಲಿ 2022ರ ಸೆಪ್ಟಂಬರ್ನಲ್ಲಿ ಬೆಂಗಳೂರಿನ ಹೊಟೇಲ್ ಉದ್ಯಮಿ ರಾಜೇಶ ಪೂಜಾರಿ ಎಂಬವರ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಎಸ್ಪಿ ಅಕ್ಷಯ ಎಂ.ಎಚ್. ಆದೇಶದಂತೆ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದು ತಂಡವು ಹಳೆಯ ರಾತ್ರಿ ಮನೆ ಕಳ್ಳತನ ಪ್ರಕರಣದ ಆರೋಪಿಗಳು, ಜೈಲಿನಿಂದ ಬಿಡುಗಡೆಯಾದ ವರ ಮಾಹಿತಿಯನ್ನು ಕಲೆ ಹಾಕಿ ಅವರ ಚಲನವಲನ, ತಾಂತ್ರಿಕ ಮಾಹಿತಿ ಹಾಗೂ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿ ಸಂಶಯಾಸ್ಪದ ಆರೋಪಿಗಳ ಮೇಲೆ ನಿಗಾವಹಿಸಿತ್ತು.
 
ಖಚಿತ ಮಾಹಿತಿಯಂತೆ ವಿಶೇಷ ತಂಡವು ವಾಹನ ತಪಾಸಣೆ ನಡೆಸುವ ವೇಳೆ ರಾಜೇಶ ದೇವಾಡಿಗ ಮತ್ತು ರಿಯಾಝ್ ಎಂಬವರಿದ್ದ ಕಾರನ್ನು ಪರಿಶೀಲನೆ ನಡೆಸಿದಾಗ ಅವರ ಬಳಿ ಯಾವುದೇ ದಾಖಲೆಯಿಲ್ಲದ ಚಿನ್ನಾಭರಣಗಳು ಕಂಡುಬಂತು. ಈ ಬಗ್ಗೆ ವಿಚಾರಿಸಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂತು ಎಂದು ಪೊಲೀಸರು ತಿಳಿಸಿದ್ದಾರೆ. ರಾಜೇಶ್ ದೇವಾಡಿಗಹಳೆಯ ಕಳ್ಳತನದ ಆರೋಪಿಯಾಗಿದ್ದು ಜೈಲುವಾಸ ಅನುಭವಿಸಿ ಬಿಡುಗಡೆಗೊಂಡಿದ್ದನು. ಈಗಾಗಲೇ ಈತನ ವಿರುದ್ಧ ಜಿಲ್ಲೆಯಲ್ಲಿ ಒಟ್ಟು 12 ಕಳ್ಳತನ ಪ್ರಕರಣಗಳು ದಾಖಲಾಗಿವೆ. ಈತನು ಕಾಪು ಪೊಲೀಸ್ ಠಾಣೆಯಲ್ಲಿ 2, ಕಾರ್ಕಳ ಗ್ರಾಮಾಂತರದಲ್ಲಿ ಒಂದು, ಪಡುಬಿದ್ರೆ ಠಾಣೆಯಲ್ಲಿ 3, ಶಿರ್ವ ಠಾಣೆಯಲ್ಲಿ 2, ಉಡುಪಿ ನಗರ ಠಾಣೆಯಲ್ಲಿ 4 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

ಮುಹಮ್ಮದ್ ರಿಯಾಝ್ ವಿರುದ್ಧ 2018ರಲ್ಲಿ ನಡೆದ ಕಾರ್ಕಳದ ಪ್ಲೋರಿನ್ ಮಚಾದೋ ಕೊಲೆ ಹಾಗೂ ಸುಲಿಗೆ ಪ್ರಕರಣ ಹಾಗೂ 2021ರಲ್ಲಿ ನಡೆದ ಮಂಜೇಶ್ವರದ ರಾಜಧಾನಿ ಜ್ಯುವೆಲರ್ಸ್ ದರೋಡೆ ಪ್ರಕರಣದ ಆರೋಪಿಯಾಗಿ ದ್ದಾನೆ. ಈ ಇಬ್ಬರು ಆರೋಪಿಗಳು ಹಿರಿಯಡ್ಕ ಜೈಲಿನಲ್ಲಿರುವಾಗ ಪರಿಚಯವಾಗಿದ್ದು ರಾತ್ರಿ ಮನೆ ಕಳ್ಳತನ ನಡೆಸಲು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ರಾತ್ರಿ ಹೊತ್ತು ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ನಡೆಸಲು ಸಂಚು ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Similar News