ಆಸ್ಟ್ರೇಲಿಯಾದಲ್ಲಿ ಮತ್ತೊಂದು ಹಿಂದು ದೇಗುಲಕ್ಕೆ ಹಾನಿ

Update: 2023-01-23 18:51 GMT

ಕ್ಯಾನ್ಬೆರಾ, ಜ.23: ಮೆಲ್ಬೋರ್ನ್ ನ ಆಲ್ಬರ್ಟ್ ಪಾರ್ಕ್ ನಲ್ಲಿ ಸೋಮವಾರ ಮತ್ತೊಂದು ಹಿಂದು ದೇವಾಲಯವನ್ನು ಧ್ವಂಸಗೊಳಿಸಲಾಗಿದ್ದು ದೇವಾಲಯದ ಗೋಡೆಯಲ್ಲಿ ಭಾರತ ವಿರೋಧಿ ಹೇಳಿಕೆಗಳನ್ನು ಬರೆಯಲಾಗಿದೆ ಎಂದು ‘ದಿ ಆಸ್ಟ್ರೇಲಿಯಾ ಟುಡೆ’ ವರದಿ ಮಾಡಿದೆ.

ಮೆಲ್ಬೋರ್ನ್ನಲ್ಲಿರುವ ಹರೆಕೃಷ್ಣ ದೇವಾಲಯದ ಆಡಳಿತ ನಿರ್ವಹಿಸುತ್ತಿರುವ ‘ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್ನೆಸ್(ಇಸ್ಕಾನ್)ನ ಅಧಿಕಾರಿಗಳು ಸೋಮವಾರ ಬೆಳಿಗ್ಗೆ ದೇವಸ್ಥಾನಕ್ಕೆ ಬಂದಾಗ ದೇವಾಲಯವನ್ನು ಧ್ವಂಸಗೊಳಿಸಿ, ಗೋಡೆಯ ಮೇಲೆ ಹಿಂದು ವಿರೋಧಿ ಹೇಳಿಕೆ ಬರೆದಿರುವುದು ಗಮನಕ್ಕೆ ಬಂದಿದೆ. ಕೆಲ ದಿನಗಳ ಹಿಂದೆ ಕ್ಯಾರಮ್ಡೌನ್ಸ್ ಪ್ರದೇಶದಲ್ಲಿರುವ ಶಿವವಿಷ್ಣು ದೇವಸ್ಥಾನವನ್ನು ಧ್ವಂಸಗೊಳಿಸಲಾಗಿತ್ತು.

ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತಂದಿರುವ ಈ ಘಟನೆಯ ಬಗ್ಗೆ ವಿಕ್ಟೋರಿಯಾ ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ ಎಂದು ಇಸ್ಕಾನ್ನ ಮಾಹಿತಿ ನಿರ್ದೇಶಕ ಭಕ್ತದಾಸ್ ಹೇಳಿದ್ದಾರೆ. ಹಿಂದು ಸಮುದಾಯದ ವಿರುದ್ಧ ಕೆಲವರು ದ್ವೇಷದ ಭಾವನೆ ಹರಡುತ್ತಿರುವ ಬಗ್ಗೆ ವಿಕ್ಟೋರಿಯಾ ಪೊಲೀಸರಿಗೆ ದೂರು ನೀಡಿದ್ದರೂ ಅವರು ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.‌

Similar News