ಜೋಶಿಮಠ ಭೂಕುಸಿತ ಶುರುವಾದಾಗಿನಿಂದ ಇದೇ ಪ್ರಥಮ ಬಾರಿಗೆ ಕುಸಿದ ಮನೆ

ಈವರೆಗೆ ಯಾವುದೇ ಅಧಿಕಾರಿಗಳು ಪರಿಶೀಲಿಸಲು ಬಂದಿಲ್ಲ ಎಂದ ಮನೆ ಮಾಲಕ

Update: 2023-01-24 07:12 GMT

ಡೆಹ್ರಾಡೂನ್: ಉತ್ತರಾಖಂಡ ರಾಜ್ಯದ ಜೋಶಿಮಠದಲ್ಲಿ (Joshimath) ಭೂಕುಸಿತ ಶುರುವಾದಾಗಿನಿಂದ ಇದೇ ಪ್ರಥಮ ಬಾರಿಗೆ ಸಿಂಗ್ ಧರ್ ವಾರ್ಡ್‌ನಲ್ಲಿ ರವಿವಾರ ಬೆಳಗ್ಗೆ ಮನೆಯೊಂದು ಕುಸಿದು ಬಿದ್ದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮನೆ ಮಾಲಕ ದಿನೇಶ್ ಲಾಲ್, ಮನೆ ಕುಸಿಯುವ ಬಗ್ಗೆ ಅಧಿಕಾರಿಗಳಿಗೆ ತಿಳಿದಿತ್ತು. ಜನವರಿ ಮೊದಲ ವಾರದಲ್ಲಿ ನಮ್ಮ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡು, ವಾಸಿಸಲು ಯೋಗ್ಯವಲ್ಲದ ಸ್ಥಿತಿ ನಿರ್ಮಾಣವಾದಾಗಿನಿಂದ ಸಿಂಗ್ ಧರ್‌ನಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ನನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.

ಕೂಲಿ ಕಾರ್ಮಿಕರಾಗಿರುವ ದಿನೇಶ್ ಲಾಲ್, "ರೂ. 7-8 ಲಕ್ಷ ಖರ್ಚು ಮಾಡಿ ನಿರ್ಮಿಸಿದ್ದ ನನ್ನ ಮನೆಯು ರವಿವಾರ ಬೆಳಗ್ಗೆ ಕುಸಿದು ಬಿತ್ತು. ಹೀಗಿದ್ದೂ ಸರ್ಕಾರದ ಯಾವುದೇ ಅಧಿಕಾರಿ ಇದನ್ನು ಪರಿಶೀಲಿಸಲು ಈವರೆಗೆ ಬಂದಿಲ್ಲ. ಮನೆಯ ಪ್ರಾಂಗಣವೂ ಕುಸಿದು ಬಿದ್ದಿದೆ" ಎಂದು ಅಳಲು ತೋಡಿಕೊಂಡಿದ್ದಾರೆ.

"ನನ್ನ ಸಹೋದರನಿಗೆ ಸೇರಿರುವ ಇನ್ನಿತರ ವಸತಿ ಕಟ್ಟಡಗಳು ಹಾಗೂ ದನದ ಕೊಟ್ಟಿಗೆಗೂ ಭಾರಿ ಹಾನಿಯಾಗಿದೆ. ಈ ಪೈಕಿ ಕೆಲವು ದನಗಳನ್ನು ನಮ್ಮ ಸಂಬಂಧಿಕರಿಗೆ ನೀಡಿದ್ದು, ಉಳಿದ ದನಗಳನ್ನು ನಾವು ಉಳಿದುಕೊಂಡಿರುವ ಪ್ರಾಥಮಿಕ ಶಾಲೆ ಎದುರು ಕಟ್ಟಿ ಹಾಕಿದ್ದೇವೆ" ಎಂದು ಮೂರು ಮಕ್ಕಳ ತಂದೆಯಾದ ದಿನೇಶ್ ಲಾಲ್ ತಿಳಿಸಿದ್ದಾರೆ.

"ನಮ್ಮ ವಾರ್ಡ್‌ನಲ್ಲಿನ ಪರಿಸ್ಥಿತಿ ಗಂಭೀರವಾಗುತ್ತಿದೆ. ಇಲ್ಲಿನ ಮನೆಗಳು ಹಾಗೂ ಬಯಲಿನಲ್ಲಿನ ಬಿರುಕುಗಳು ಹೆಚ್ಚೆಚ್ಚು ಆಳ ಮತ್ತು ಅಗಲವಾಗುತ್ತಿವೆ" ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಮನೆ ಕುಸಿತವನ್ನು ದೃಢಪಡಿಸಿರುವ ಚಮೋಲಿ ಜಿಲ್ಲಾಧಿಕಾರಿ ಹಿಮಾಂಶು ಖುರಾನಾ, "ಆ ಮನೆ ಅದಾಗಲೇ ಹಾನಿಗೊಳಗಾಗಿತ್ತು ಮತ್ತು ಆ ಮನೆಯ ಸದಸ್ಯರನ್ನು ತೆರವುಗೊಳಿಸಲಾಗಿತ್ತು. ನನಗಿರುವ ಮಾಹಿತಿಯ ಪ್ರಕಾರ, ಪಟ್ಟಣದಲ್ಲಿ ಬೇರಾವುದೇ ಕಟ್ಟಡಗಳು ಕುಸಿದಿಲ್ಲ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೈದರಾಬಾದ್ ವಿವಿ ಕ್ಯಾಂಪಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ: ದೂರು ದಾಖಲು 

Similar News